ಕಲಬುರಗಿ : ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಾಮುಕ ಶಿಕ್ಷನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಯೊಳಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೋಕ್ಸೋ ಕೆಸ್ ದಾಖಲು ಮಾಡಲಾಗಿದೆ. ಇದೀಗ ಅತ್ಯಾಚಾರ ಆರೋಪಿ ಅತಿಥಿ ಶಿಕ್ಷಕ ಶಿವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಸ್ಥರು ಈತನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಿವರಾಜ್ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಆಗಿದ್ದಾನೆ. ಸ್ವ ಗ್ರಾಮದಲ್ಲಿ ತಾನು ವಿದ್ಯಾಭ್ಯಾಸ ಮಾಡಿ ಓದಿ, ಬೆಳೆದ ಶಾಲೆಗೆ ಶಾಲೆಯಲ್ಲಿಯೇ ಅತಿಥಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದನು. ಆದರೆ, ಇಡೀ ಗ್ರಾಮದ ಜನರು ಈತನಿಗೆ ಪರಿಚಿತವಿರುವ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಪೂರ್ವಾಪರ ಮತ್ತು ಹಿನ್ನೆಲೆಯನ್ನೂ ತಿಳಿದುಕೊಂಡಿದ್ದಾನೆ. ಈತನ ಕೆಲವು ಸಂಬಂಧಿಕರ ಮಕ್ಕಳೂ ಈ ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ.
ಆದರೆ, ಪಾಠ ಮಾಡುತ್ತಲೇ ಆತನ ಕಾಮುಕ ದೃಷ್ಟಿ ಅಪ್ರಾಪ್ತ 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಬಿದ್ದಿದೆ. ಅದೂ ಕೂಡ ತಮ್ಮ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಬಡ ಕಾರ್ಮಿಕನ ಮಗಳಾಗಿದ್ದ ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕಿದ್ದಾನೆ. ವಿದ್ಯಾರ್ಥಿನಿಯ ಚಲನವಲನ ಗಮನಿಸುತ್ತಿದ್ದ ಈ ಕಾಮುಕ ಶಿಕ್ಷಕ ವಿದ್ಯಾರ್ಥಿನಿಯ ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋದ ವೇಳೆ ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ್ದಾನೆ. ಆಗ ಏಕಾಏಕಿ ಮನೆಯೊಳಗೆ ನುಗ್ಗಿದ ಶಿಕ್ಷಕ ಶಿವರಾಜ್ ತಾನೇ ಪಾಠ ಕಲಿಸಿದ ವಿದ್ಯಾರ್ಥಿನಿ, ಅದರಲ್ಲಿಯೂ ಅಪ್ರಾಪ್ತೆ ಎಂಬುದನ್ನೂ ಅರಿಯದೇ ಆಕೆಯ ಮೇಲೆ ಮೃಗದಂತೆ ಎರಗಿದ್ದಾನೆ.
ಕಾಮುಕ ಶಿಕ್ಷಕನ ಮೃಗೀಯ ವರ್ತನೆಯಿಂದ ಅಪ್ರಾಪ್ತ ವಿದ್ಯಾರ್ಥಿನಿ ಚೀರಾಡುತ್ತಾ ತಪ್ಪಸಿಕೊಳ್ಳಲು ಸಾಧ್ಯವಾಗದೇ ನರಳಿದ್ದಾಳೆ. ಇತ್ತ ತನ್ನ ಕಾಮತೃಷೆಗೆ ವಿದ್ಯಾರ್ಥಿನಿ ಬಲಿ ಪಡೆದ ಶಿಕ್ಷಕನ ಕ್ರೂರ ಕೃತ್ಯದ ಬಗ್ಗೆ ವಿದ್ಯಾರ್ಥಿನಿ ಪೋಷಕರ ಬಳಿ ಹೇಳಿಕೊಂಡಿದ್ದು, ಅವರ ಪೋಷಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಎರಡು ದಿನಗಳ ಕಾಲ ನಾಪತ್ತೆ ಆಗಿದ್ದ ಕಾಮುಕ ಶಿಕ್ಷಕ ಶಿವರಾಜ್‌ನಲ್ಲಿ ಇದೀಗ ಪೊಲೀಸರು ಬಂಧಿಸಿದ್ದಾರೆ.