ಮೈಸೂರು : ಕನಕದಾಸರು ಬೋಧನೆ ಮಾಡಿರುವ ಅಂಶಗಳನ್ನು ಅಳವಡಿಸಿಕೊಂಡರೆ, ಸಮ ಸಮಾಜದ ನಿರ್ಮಾಣ ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ನಡೆದ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಶೂದ್ರ ಸಮುದಾಯದಿಂದ ಬಂದಿದ್ದ ಕನಕದಾಸರೂ ಸಹ ಜಾತಿ ತಾರತಮ್ಯವನ್ನು ಅನುಭವಿಸಿದ್ದರು. ಇಂತಹ ಜಾತಿ ತಾರತಮ್ಯವನ್ನು ಅನುಭವಿಸಿಯೇ ಅವರು ಶ್ರೇಷ್ಠ ದಾಸರಾದರು.ಇವತ್ತಿಗೂ ಸಹ ಸಮಾಜ ಅವರನ್ನು ಮರೆಯದೆ ನೆನಪಿಸಿಕೊಳ್ಳುವ ಸಾಧನೆಯನ್ನು ಮಾಡಿದರು. ವಾಸ್ಯರಾಯರು ಹೇಳಿಕೊಟ್ಟ ಎಮ್ಮೆಯ ಮಂತ್ರದಿಂದಲೇ ಎಮ್ಮೆಯನ್ನು ಪ್ರತ್ಯಕ್ಷವಾಗುವಂತೆ ಮಾಡಿದರು. ಹೀಗಾಗಿ ಕನಕದಾಸರು `ಭಕ್ತಿ ಹಾಗೂ ಶ್ರದ್ಧೆಯ ಪ್ರತಿರೂಪ ಎಂದು ಹೇಳಿದರು.
ಸಮಾಜದಲ್ಲಿ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಕನಕದಾಸರು, ಶರಣರು, ಬುದ್ಧ ಹಾಗೂ ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ಪ್ರಯತ್ನ ಪಟ್ಟಿದ್ದಾರೆ. ವರ್ಣವ್ಯವಸ್ಥೆ ಎಂಬುದು ಬಾವಿಯಲ್ಲಿರುವ ನೀರಿನ ತರ. ಆಗಾಗ ಬಾವಿಯಲ್ಲಿರುವ ಕಸವನ್ನು ತೆಗೆದುಹಾಕಿ ಶುಚಿ ನೀರನ್ನು ಪಡೆದ ನಂತರ ಮತ್ತೆ ಅದೇ ವ್ಯವಸ್ಥೆ ಉಂಟಾಗುತ್ತದೆ. ಬಾವಿಯ ನೀರಿನಲ್ಲಿ ಚಲನಶೀಲತೆ ಇರುವುದಿಲ್ಲ. ಹಾಗೆಯೆ ವರ್ಣ ವ್ಯವಸ್ಥೆಯಲ್ಲೂ ಚಲನಶೀಲತೆ ಇಲ್ಲ ಎಂದರು.
ಚಲನಶೀಲತೆ ಇಲ್ಲದಿರುವುದರಿಂದ ವರ್ಣ ವ್ಯವಸ್ಥೆ ಜಡ್ಡುಗಟ್ಟಿದೆ. ಎಷ್ಟೋ ಮಹನೀಯರು ಜಾತಿವ್ಯಸ್ಥೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರೂ ಸಹ ಆ ಸಮಯಕ್ಕೆ ಜಾತಿ ವ್ಯವಸ್ಥೆ ಕಡಿಮೆಯಾಗುತ್ತಿತ್ತೆ ಹೊರತು ಶಾಶ್ವತವಾಗಿ ಹೋಗುತ್ತಿಲ್ಲ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಮಾತ್ರ ಸಮಾನತೆ ಸಿಗುತ್ತಿದೆ. ಸಂವಿಧಾನ ಇಲ್ಲದೆಹೋಗಿದ್ದರೆ ಜಾತಿವ್ಯವಸ್ಥೆ ಇನ್ನೂ ಕಠಿಣವಾಗಿರುತ್ತಿತ್ತು ಎಂದು ಎಂದರು.
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಬಸವಣ್ಣ, ಕನಕದಾಸರ ರೀತಿಯಲ್ಲಿ ಕ್ರಾಂತಿಯನ್ನು ಇಂದು ಮಾಡಬೇಕಾಗಿಲ್ಲ. ಇಂದು ಅಸಮಾನತೆಯ ತತ್ವಗಳನ್ನು ಪ್ರತಿಪಾದಿಸುವವರನ್ನು ನಾವು ವಿರೋಧಿಸಬೇಕು. ಸಮಾನತೆ ತತ್ವಗಳ ಇಟ್ಟುಕೊಂಡವರ ಬೆಂಬಲಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿಯನ್ನು ವಿರೋಧಿಸಬೇಕು ಕಾಂಗ್ರೆಸನ್ನ ಬೆಂಬಲಿಸಬೇಕು ಎನ್ನುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಸಮಾನತೆಯ ಆಶಯ, ಆದರ್ಶಗಳನ್ನು ಇಟ್ಟುಕೊಂಡು ಬಂದರೆ ಸಮಾಜವನ್ನು ಬದಲಾಯಿಸಲು ಸಾದ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಶಶಿಕಾಂತ್ ಎಸ್ ಉಡುಕೇರಿ, ಕನಕದಾಸರು ಶ್ರೇಷ್ಠ ಭಕ್ತ, ದಾಸ, ಹಾಗೂ ಸಾಮಾಜಿಕ ಚಿಂತಕರಾಗಿ ಹೊರಹೊಮ್ಮಿದ ವಿಶೇಷ ವ್ಯಕ್ತಿಯಾಗಿದ್ದಾರೆ.ಭಕ್ತಿ ಎಂದಾಗ ನಾವು ಮಾಡುವ ಕರ್ತವ್ಯದಲ್ಲಿ ನೋಡಬೇಕು. ಸಾಮಾನ್ಯ ಜನತೆಗೆ ಅವಶ್ಯವಾದದನ್ನು ಬೋಸುತ್ತ ಸಮಾಜದ ಹತ್ತಿರಕ್ಕೆ ಸಂದೇಶವನ್ನು ತಿಳಿಸಿ ಎತ್ತರಕ್ಕೆ ಬೆಳೆದು ಇಂದು ಶ್ರೇಷ್ಟ ಕನಕದಾಸರಾಗಿದ್ದಾರೆ ಎಂದರು
ನಮ್ಮ ಸರ್ಕಾರ ಕರ್ನಾಟಕದ ಯಾವುದಾದರು ಒಂದು ನಗರಕ್ಕೆ ಕನಕದಾಸರ ಹೆಸರು ಹಾಗೂ ಕನಕನಕಿಂಡಿಗೆ ವಿಶ್ವದರ್ಜೆ ಪಾರಂಪರಿಕ ಸ್ಥಾನ ದೊರಕುವಂತೆ ಆಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ಕರಾಮುವಿಯ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಶೈಕ್ಷಣಿಕ ವಿಭಾಗದಲ್ಲಿ ಡೀನ್ ಪ್ರೊ.ಎಂ.ರಾಮನಾಥ್ ನಾಯ್ಡು, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸಿ.ಎಸ್.ಆನಂದಕುಮಾರ್, ಹಣಕಾಸು ಅಬಕಾರಿ ಪ್ರೊ.ನಿರಂಜನ್ ರಾಜ್ ಎಸ್, ಡೀನ್ ಡಾ.ಎನ್.ಆರ್.ಚಂದ್ರೇಗೌಡ, ಡಾ.ಎಚ್.ಬೀರಪ್ಪ ಹಾಜರಿದ್ದರು.
538 ವರ್ಷಗಳಾದರೂ ಸಹ ಇಂದಿಗೂ ಕನಕದಾಸರನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಪ್ರಮುಖ ಕಾರಣ ಅವರ ವಿಚಾರಧಾರೆಗಳು. ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ, ಶೋಷಿತರ ಪರವಾಗಿ ಧ್ವನಿ ಎತ್ತಿದ್ದರು. ಭಕ್ತಿ ಪಂಥದಲ್ಲಿ ದಾಸರಾಗಿದ್ದರೂ ಕೂಡ ವೆ`ಚಾರಿಕತೆಯ ಬಗ್ಗೆ ಮಾತನಾಡಿ, ಎಲ್ಲಾ ಧರ್ಮಗಳಲಿದ್ದ ಡಂಭಾಚಾರ, ಮೂಢನಂಬಿಕೆಗಳನ್ನು ವಿರೋಧ ಮಾಡಿದ್ದರು.
– ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ



