ಕನಕಪುರ: ೧೫ ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಎದುರು ಪೌರಕಾರ್ಮಿಕರು ಮೈಮೇಲೆ ಸೆಗಣಿ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚಿಕ್ಕ ತಿರುಪತಿ ಎಂದೇ ಖ್ಯಾತಿ ಹೊಂದಿರುವ ಕಲ್ಲಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಗಯ್ಯ ಹಾಗೂ ಸುರೇಶ್ ಎಂಬವರಿಗೆ ೧೫ ತಿಂಗಳ ವೇತನ ಬಾಕಿ ಇದೆ ಎನ್ನಲಾಗಿದ್ದು, ಈ ಹಣವನ್ನು ನೀಡದೆ ಪಂಚಾಯತ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನೀರಿಗೆ ಹಸುವಿನ ಸೆಗಣಿ ಕಲಸಿ ಮೈಮೇಲೆ ಸುರಿದಿದ್ದಾರೆ. ತಮ್ಮ ಸಂಪೂರ್ಣ ವೇತನ ನೀಡುವವರೆಗೂ ಸ್ಥಳದಲ್ಲೇ ಕುಳಿತುಕೊಳ್ಳುವುದಾಗಿ ಪೌರಕಾರ್ಮಿಕರು ತಿಳಿಸಿದ್ದಾರೆ.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಎನ್.ನವೀನ್, ಪದಾಧಿಕಾರಿಗಳಾದ ಶೇಖರ್ ಪಟೇಲ್, ರಾಮಕೃಷ್ಣ ನಾಯ್ಕ, ಅರುಣ್ ಗೌಡ ಮತ್ತಿತರರು ಹಾಜರಿದ್ದರು.