ಕನಕಪುರ: ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷವು ನಡೆದುಕೊಂಡು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಅವುಗಳ ಅನುಷ್ಟಾನ ಮಾಡಲು ಇರುವ ಸಮಸ್ಯೆಗಳನ್ನು ದೂರ ಮಾಡಲು ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಆಡಳಿತಸೌಧದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಕಚೇರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಕಾಂಗ್ರೇಸ್ ಪಕ್ಷ ಬಡವರ ಪರವಾದ ಸರ್ಕಾರ ಎಂಬುದನ್ನು ರಾಜ್ಯದಲ್ಲಿ ಅಲ್ಲದೆ, ದೇಶದ ಇತರೆ ರಾಜ್ಯಗಳಿಗೂ ವಿಸ್ತರಣೆ ಮಾಡುತ್ತಿದ್ದು, ಕರ್ನಾಟಕ ಮಾದರಿಯಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಜಾರಿ ಮಾಡುವುದರ ಜೊತೆಗೆ ಅದು ಎಷ್ಟರ ಮಟ್ಟಿಗೆ ನಾಗರೀಕರಿಗೆ ತಲುಪಿದೆ ಮತ್ತು ಎಲ್ಲಿ ದೋಷ ಆಗಿದೆ ಅನ್ನುವುದನ್ನು ಪತ್ತೆ ಹಚ್ಚಿ ಸರಿಪಡಿಸಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ತಾಲ್ಲೂಕು ಸಮಿತಿ ಮಾಡಲಿದೆ ಎಂದರು.
ಸರ್ಕಾರದ ಯೋಜನೆ ತಲುಪುವಲ್ಲಿ ವಿಳಂಬವಾದರೆ ಇಲ್ಲಿ ಬಂದು ಅದನ್ನು ಸರಿಪಡಿಸಿಕೊಂಡು ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಸಮತಿ ರಚನೆ ಮಾಡಿ ಯೋಜನೆಯನ್ನು ಅರ್ಹರಿಗೆ ತಲುಪಿಸಲಾಗಿತ್ತದೆ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆ.ಎನ್.ದಿಲೀಪ್, ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ, ಸದಸ್ಯರಾಗಿ ರಾಣಿ, ತಗಡೇಗೌಡ, ಸರಸ್ವತಿ, ಸೈಯದ್ ಖುದ್ರತ್ ಉಲ್ಲಾ, ವಾಣಿ, ಉಮರಾಜು, ಮಹೇಶ್ ನಾಯಕ್, ಶಿವರತ್ನಮ್ಮ, ಅರಸೇಗೌಡ, ರೂಪ.ಡಿ.ಎಸ್, ಸಾಗರ್ ಗೌಡ, ಮಂಜುಳಾ, ಮಂಜುನಾಥ್ ನೇಮಕಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದ ಶಾಸಕರ ಕಚೇರಿ, ಬಗರ್‌ಹುಕ್ಕುಂ ಅಧ್ಯಕ್ಷರ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಗರೀಕರು ಮಾಜಿ ಸಂಸದ ಡಿ.ಕೆ. ಸುರೇಶ್ ಅವರಲ್ಲಿ ಕಚೇರಿ ಉದ್ಘಾಟನೆ ಬಳಿಕ ಮನವಿಗಳನ್ನು ಸಲ್ಲಿಸಿದರು.
ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್‌ಹುಸೇನ್, ಮಾಜಿ ಶಾಸಕ ಕೆ.ರಾಜು, ವಿಧಾನ ಪರಿಷತ್ ಸದಸ್ಯರಾದ ರಾಮೋಜಿಗೌಡ, ಎಸ್.ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಕನಕಪುರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಕೃಷ್ಣಮೂರ್ತಿ , ಮುಖಂಡರಾದ ವಿಶ್ವನಾಥ್, ಎಚ್.ಕೆ.ಶ್ರೀಕಂಠ, ಕೆ.ಎಂ.ರಾಜೇಂದ್ರ, ಜೋಸೆಫ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗು ಮುಖಂಡರು ಉಪಸ್ಥಿತರಿದ್ದರು.