ಪಿರಿಯಾಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಪಿರಿಯಾಪಟ್ಟಣ ಯೋಜನೆ ಕಚೇರಿ ವತಿಯಿಂದ ಕಂದೆಗಾಲ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಮಂಜೂರಾಗಿದ್ದ 2 ಲಕ್ಷ ರೂ ಗಳ ಸಹಾಯ ಧನದ ಡಿಡಿ ಯನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹಸ್ತಾಂತರಿಸಿದರು.
ಈ ವೇಳೆ ಲೀಲಾವತಿ ಅವರು ಮಾತನಾಡಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಹಾಗೂ ಲೀಲಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಸಬಲೀಕರಣ ಜೊತೆಗೆ ಸಮಾಜದ ಏಳಿಗೆಗಾಗಿ ಸಮುದಾಯ ಕಾರ್ಯಕ್ರಮಗಳಿಗೆ ಸಹಾಯಧನ ವಿತರಿಸುವ ಮೂಲಕ ಸಹಕಾರ ನೀಡಲಾಗುತ್ತಿದ್ದು ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಸಂಸ್ಥೆಯ ಪಿರಿಯಾಪಟ್ಟಣ ಯೋಜನಾಧಿಕಾರಿ ಸುರೇಶ್ ಶೆಟ್ಟಿ ಅವರು ಮಾತನಾಡಿ ಸಂಸ್ಥೆ ವತಿಯಿಂದ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸ್ವಸಹಾಯ ಸಂಘ ರಚಿಸಿ ಆರ್ಥಿಕ ಸಹಾಯ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಅನುದಾನ ನೀಡಿ ಸಹಕರಿಸಲಾಗುತ್ತಿದೆ ಎಂದರು.
ಈ ಸಂದರ್ಭ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಸೌಮ್ಯ, ನಿರ್ದೇಶಕರು ಹಾಗು ಸದಸ್ಯರು, ಗ್ರಾಮದ ಮುಖಂಡರಾದ ಚಂದ್ರಶೇಖರ್, ಸ್ವಾಮಿಗೌಡ, ಸಂಸ್ಥೆಯ ಹುಣಸವಾಡಿ ವಲಯ ಮೇಲ್ವಿಚಾರಕಿ ಶೀಲಾ, ಸೇವಾ ಪ್ರತಿನಿಧಿಗಳಾದ ಸವಿತಾ, ರವಿತಾ ಮತ್ತು ಗ್ರಾಮಸ್ಥರು ಇದ್ದರು.