ಮಂಡ್ಯ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಅನ್ನಬಾಗ್ಯ ಅಕ್ಕಿಗೆ ಸೊಸೈಟಿಯಲ್ಲಿಯೇ ಕನ್ನ ಹಾಕುತ್ತಿದ್ದು, ಊರಿನ ಬಡ ಜನರಿಗೆ ಕಳೆದ ಎರಡು ತಿಂಗಳಿಂದ ಜನರಿಗೆ ಅಕ್ಕಿ ಕೊಡದೆ ವಂಚನೆ ಮಾಡಿರುವ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದಲ್ಲಿ ನಡೆದಿದೆ.
ತಳಗವಾದಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ ಯಿಂದ ಜನರಿಗೆ ವಂಚನೆ ಮಾಡಿದ್ದು, ಕಳೆದ ಎರಡು ತಿಂಗಳಿಂದ ಈ ಗ್ರಾಮದ ಬಡ ಜನರಿಗೆ ಅಕ್ಕಿ ಕೊಡದೆ ಆಡಳಿತ ಮಂಡಳಿ ಕಳ್ಳಾಟವಾಡುತ್ತಿದೆ.
ಆಡಳಿತ ಮಂಡಳಿ ಈ ಬಡ ಜನರ ನೂರಾರು ಕ್ವಿಂಟಾಲ್ ಅಕ್ಕಿಯನ್ನೆ ಮಾರಿಕೊಂಡು ನುಂಗಿ ನೀರು ಕುಡಿದಿದ್ದಾರೆ.

ಜನರಿಗೆ ಅಕ್ಕಿ ವಿತರಿಸುವುದಾಗಿ ಈಗಾಗಲೇ ಉಗ್ರಾಣದಿಂದ ಅಕ್ಕಿ ಪಡೆದಿರುವ ಸೊಸೈಟಿಯ ಅಧ್ಯಕ್ಷ ಚೌಡಯ್ಯ, ಕಾರ್ಯದರ್ಶಿ ಉಮೇಶ್ ಕ್ವಿಂಟಾಲ್ ಗಟ್ಟಲೇ ಅಕ್ಕಿಯನ್ನು ಗೋಲ್ ಮಾಲ್ ಮಾಡಿದ್ದಾರೆ.
ಇಲ್ಲಿನ 600ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ ಕೊಡದೆ ಅವರ ಬಳಿ ತಂಬ್ ಪಡೆದು ವಂಚನೆ ಮಾಡಿದ್ದಾರೆ. ಅನ್ನಭಾಗ್ಯದ ಅಕ್ಕಿ ಸಿಗದೆ ಗ್ರಾಮದ ಬಡ ಕುಟುಂಬದವರು ಕಂಗಾಲಾಗಿದ್ದಾರೆ.
ಸೊಸೈಟಿಯಲ್ಲಿ ಕೊಡುವ ಉಚಿತ ಅಕ್ಕಿಗಾಗಿ ಗ್ರಾಮಸ್ಥರು ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಪ್ರಕರಣ ಗೊತ್ತಿದ್ದರೂ ಮುಚ್ಚಿ ಹಾಕಲು ಸರ್ಕಾರಿ ಅಧಿಕಾರಿಗಳು ಮುಂದಾಗಿದ್ದಾರೆ.
ಅಕ್ರಮ ನಡೆಸಿದವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.