ಮಂಗಳೂರು (ದಕ್ಷಿಣ ಕನ್ನಡ): ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮ್ಚೆ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿರುವ “ಲೈಟ್ ಹೌಸ್” ಕನ್ನಡ ಸಿನೆಮಾ ಮೇ 14 ರಂದು ಬೆಳ್ಳಿ ತೆರೆಯ ಮೇಲೆ ಪ್ರದರ್ಶನಗೊಳ್ಳಲಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿನೆಮಾ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ತಿಳಿಸಿದರು.
ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ರು. ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಹೆಸರಾಂತ ಕಲಾವಿದರಾದ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್ , ನಮಿತಾ ಕಿರಣ ಮುಂತಾದ ಕಲಾವಿದರ ಜೊತೆಗೆ ಸಾಕಷ್ಟು ಬಾಲ ನಟರು ಚಿತ್ರದಲ್ಲಿ ನಟಿಸಿದ್ದಾರೆ .
ಚಿತ್ರವು ಪ್ರಮುಖವಾಗಿ ಕರಾವಳಿ ಭಾಗದ ಕಲೆ-ಸಂಸ್ಕೃತಿ-ಆಚಾರ-ವಿಚಾರಗಳ ಬಗ್ಗೆ ಮೆಲುಕುಹಾಕಲಾಗಿದೆ . ಚಿತ್ರದ ಬಹುತೇಕ ಚಿತ್ರೀಕರಣವನ್ನು ಉಡುಪಿಯಲ್ಲಿ ನಡೆಸಲಾಗಿದ್ದು ಕರಾವಳಿಯ ರಮ್ಯತೆಯನ್ನು ಸೆರೆಹಿಡಿಯಲಾಗಿದೆ.
“ಲೈಟ್ ಹೌಸ್ ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಇಡೀ ಸಂಸಾರ ಮಕ್ಕಳ ಜೊತೆ ಕೂತು ನೋಡುವ ಸಿನೆಮಾ ಇದಾಗಿದ್ದು, ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವದ ಜೊತೆಜೊತೆಯಾಗಿ ಸಿನೆಮಾ ಸಾಗುತ್ತದೆ . ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ವಾಸುಕಿ ವೈಭವ್, ಪೃಥ್ವಿ ಭಟ್, ದಿಯಾ ಹೆಗ್ಡೆ ಧ್ವನಿಯಾಗಿದ್ದಾರೆ.
ಚಿತ್ರದ ಛಾಯಗ್ರಹಣ ಹಾಗೂ ಸಂಕಲನದ ಜವಬ್ದಾರಿಯನ್ನು ಪ್ರಜ್ವರ್ ಸುಮಾರ್ಣ ವಹಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತವನ್ನು ಕಾರ್ತಿಕ್ ಮುಲ್ಕಿ ನೀಡಿರುತ್ತಾರೆ. ಉಡುಪಿ ನಮ್ಮ ಊರು ಹಾಡಿಗೆ ಗಿರಿಧರ್ ದಿವಾನ್ ಸಂಗೀತವನ್ನು ನೀಡಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು, ಶೈಲಶ್ರೀ ಮುಲ್ಕಿ, ಯತೀಶ್ ಪೂಜಾರಿ , ಪುಂಡಲಿಕ ಉಪಸ್ಥಿತರಿದ್ದರು.