ಚಾಮರಾಜನಗರ: ನಿಸಾರ್ ಅಹಮದ್ ರವರ ನಿತ್ಯೋತ್ಸವ ಗೀತೆ ಕನ್ನಡ ಸಾಹಿತ್ಯದ ಶ್ರೇಷ್ಠ ಗೀತೆಯಾಗಿದೆ. ಕನ್ನಡಿಗರಿಗೆ ನಿರಂತರ ಉತ್ಸಾಹ ತುಂಬುವ ನಿತ್ಯೋತ್ಸವ ಗೀತೆ ದೇಶವಿದೇಶಗಳಲ್ಲೂ ಜನಪ್ರಿಯವಾಗಿದೆ. ನಿತ್ಯೋತ್ಸವ ಗೀತೆಯ ಮೂಲಕ ಕನ್ನಡ ನಾಡು, ನುಡಿ, ಪ್ರಕೃತಿ ,ಭಾಷೆ, ಸೌಂದರ್ಯ ಪ್ರಜ್ಞೆಯನ್ನು ಜನಸಾಮಾನ್ಯರಲ್ಲಿ ಮೂಡಿಸಿ ಕನ್ನಡತನವನ್ನು ಕನ್ನಡದ ಹಬ್ಬವನ್ನಾಗಿಸಿದ ನಿಸಾರ್ ಅವರ ಕೊಡುಗೆಯನ್ನು ಕನ್ನಡ ಸಾಹಿತ್ಯ ಪ್ರಪಂಚ ಎಂದು ಮರೆಯದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ರವರ ಜನ್ಮದಿನ ಹಾಗೂ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಿಸಾರ್ ಅಹಮದ್ ರವರು ಬಾಲ್ಯದಿಂದಲೂ ಸಾಹಿತ್ಯ ರಚನೆಯ ಮೂಲಕ ಎತ್ತರಕ್ಕೆ ಬೆಳೆದವರು. ಉನ್ನತ ವ್ಯಾಸಂಗ ಮಾಡಿ ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡ ಸಾಹಿತ್ಯ, ವಿಮರ್ಶೆ, ಕವನ, ಗದ್ಯಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಭಾವಗೀತೆ ಧ್ವನಿ ಸುರಳಿಯನ್ನು ತಮ್ಮ ನಿತ್ಯೋತ್ಸವದ ಮೂಲಕ ಹೊರ ತಂದ ನಿಸಾರ್ ಅಹಮದ್ ರವರ ಚಿಂತನೆ ಧ್ವನಿಸುರಳಿಯ ಕ್ಷೇತ್ರಕ್ಕೆ ಕನ್ನಡದ ಸಾಹಿತ್ಯಗಳು ಬೆಳಗುವಂತೆ ಆಯಿತು. ನೂರಾರು ಕೃತಿಗಳ ರಚನಕಾರರಾದ ನಿಸಾರ್ ಅಹಮದ್ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾಗಿ, ಹಲವಾರು ಪ್ರಶಸ್ತಿ ಪುರಸ್ಕೃತರಾಗಿ ಜನಮಾನಸದಲ್ಲಿ ಸದಾ ಉಳಿದಿದ್ದಾರೆ ಎಂದು ಹೇಳಿದರು.
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಗೀತೆ, ಬೆಣ್ಣೆ ಕದ್ದ ನಮ್ಮ ಕೃಷ್ಣ ಗೀತೆಗಳು ನಿಸಾರ್ ಅಹಮದ್ ರವರನ್ನು ಶಾಶ್ವತವಾಗಿ ಕನ್ನಡ ಸಾಹಿತ್ಯದಲ್ಲಿ ಉಳಿಸಿದೆ. ಸಾರೇ ಜಾಹನ್ಸೆ ಅಚ್ಚ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದ ನಿಸಾರ್ ಅಹಮದ್ ರವರು ಸಂವೇದನಾಶೀಲ ,ಜನಪ್ರಿಯ ಕವಿಯಾಗಿ, ಸುಗಮ ಸಂಗೀತ ಕ್ಷೇತ್ರದ ಯಶಸ್ಸಿಗೆ ಅವರ ಕೊಡುಗೆ ಅಪಾರ ಎಂದು ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ನಿವೃತ್ತ ಶಿಕ್ಷಕಿ ಸರಸ್ವತಿ ರವರು ನಿಸಾರ್ ಅಹಮದ್ ರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟನೆ ನೆರವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರ ಪ್ರಸಾದ್ ರವರು ಕೆ ಎಸ್ ನಿಸಾರ್ ಅಹಮದ್ ರವರ ಗೀತೆಗಳನ್ನು ಹಾಡಿ ಗೌರವಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷ ಆರ್ ವಿ ಮಹದೇವಪ್ಪ ಪ್ರೊಫೆಸರ್ ಕೆಎಸ್ ನಿಸಾರ್ ಅಹಮದ್ ರವರ ವ್ಯಕ್ತಿತ್ವವನ್ನು ಪರಿಚಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ ಕಿಶೋರ್ ಕುಮಾರ್ ,ಸಿರಿಗನ್ನಡ ಪುಸ್ತಕ ಪ್ರಾಧಿಕಾರದ ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ವೀರಶೆಟ್ಟಿ, ಹಾಗೂ ಮಕ್ಕಳು ಉಪಸ್ಥಿತರಿದ್ದರು.