ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಜೊತೆಗೆ ಪ್ರೇಮಕಥೆಯ, ಪ್ರಮೋದ್ ಜಯ ನಿರ್ದೇಶಿಸಿರುವ “ದಿಲ್ ಖುಷ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಡಾರ್ಲಿಂಗ್ ಕೃಷ್ಣ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
“ದಿಲ್ ಖುಷ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. “ದಿಲ್ ಖುಷ್ ಎಂದರೆ ನಾಯಕ – ನಾಯಕಿ ಹೆಸರು. ಮನೆಮಂದಿಯಲ್ಲಾ ಕುಳಿತು ನೋಡುವ ಈ ಕೌಟುಂಬಿಕ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ.
ಯುವ ಪ್ರತಿಭೆ ರಂಜಿತ್ ದಿಲ್ ಖುಷ್ ಚಿತ್ರದ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ರಂಗಾಯಣ ರಘು, ಅರುಣಾ ಬಾಲರಾಜ್, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು, ಸೂರ್ಯ ಪ್ರವೀಣ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಜಯಪ್ರಭ ಕರ್ಲ ಫ್ರೇಮ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದೆ. ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.