ಸಹದೇವ್ ಕೆಲವಡಿ ಅವರು ನಿರ್ದೇಶನ ಮಾಡಿರುವ ‘ಕೆಂಡ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ‘ಗಂಟುಮೂಟೆ’ ಚಿತ್ರದ ಖ್ಯಾತಿಯ ರೂಪಾ ರಾವ್ ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಭಿನ್ನವಾದ ಒಂದು ಕಥಾಹಂದರವನ್ನು ಹೊಂದಿದೆ ಎಂಬ ವಿಚಾರ ಈಗಾಗಲೇ ಟೀಸರ್, ಪೋಸ್ಟರ್, ಹಾಡುಗಳ ಮೂಲಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ‘ಕೆಂಡ’ ಸಿನಿಮಾದ ಬಗ್ಗೆ ಇನ್ನೊಂದು ಖುಷಿಯ ಸಮಾಚಾರವನ್ನು ಚಿತ್ರತಂಡವರು ಹಂಚಿಕೊಂಡಿದ್ದಾರೆ. ಅದೇನೆಂದರೆ, ‘ಕೆಂಡ’ ಚಿತ್ರವು ಈಗ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆ ಆಗಿದೆ.
14ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್-2024’ ದೆಹಲಿಯಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ‘ಕೆಂಡ’ ಸಿನಿಮಾ ಪ್ರವೇಶ ಪಡೆದುಕೊಂಡಿದೆ. ಈ ಚಿತ್ರೋತ್ಸವವು ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದ್ದು, ಇದಕ್ಕೆ ತಮ್ಮ ಸಿನಿಮಾ ಆಯ್ಕೆ ಆಗಬೇಕು ಎಂದು ಎಷ್ಟೋ ಚಿತ್ರತಂಡದವರು ಕನಸು ಕಂಡಿರುತ್ತಾರೆ. ಹಾಗಂತ, ಈ ಸಿನಿಮೋತ್ಸವಕ್ಕೆ ಆಯ್ಕೆ ಆಗುವುದು ಸುಲಭವಲ್ಲ.
‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ನ ಹಲವು ಮಾನದಂಡಗಳಲ್ಲಿ ಪಾಸ್ ಆಗಿ ಸೈ ಎನಿಸಿಕೊಳ್ಳಬೇಕು. ಆಗ ಮಾತ್ರವೇ ಸಿನಿಮಾ ಆಯ್ಕೆ ಆಗಲು ಸಾಧ್ಯ. ಎಲ್ಲ ರೀತಿಯಿಂದಲೂ ಆ ರೀತಿಯ ಅಗತ್ಯ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳು ಮಾತ್ರ ಇದರಲ್ಲಿ ಅವಕಾಶ ಪಡೆಯುತ್ತವೆ. ಆ ಎಲ್ಲ ಮಾನದಂಡಗಳನ್ನು ದಾಟಿಕೊಂಡು ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ‘ಕೆಂಡ’ ಸಿನಿಮಾ ಆಯ್ಕೆ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ‘ಕೆಂಡ’ ಸಿನಿಮಾವನ್ನು ರೂಪಾ ರಾವ್ ಅವರು ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಪ್ರದೀಪ್ ನಾಯಕ್ ಅವರು ಸಂಕಲನ ಮಾಡಿದ್ದಾರೆ. ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನ ಮಾಡಿದ್ದಾರೆ. ಬಿ.ವಿ. ಭರತ್, ವಿನೋದ್ ಸುಶೀಲ, ಪ್ರಣವ್ ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಬಿಂದು ರಕ್ಷಿದಿ, ಸಚಿನ್ ಶ್ರೀನಾಥ್, ಶರತ್ ಗೌಡ, ಸತೀಶ್ ಕುಮಾರ್, ಪೃಥ್ವಿ ಬನವಾಸಿ, ಅರ್ಚನ ಶ್ಯಾಮ್, ದೀಪ್ತಿ ನಾಗೇಂದ್ರ ಮುಂತಾದ ಕಲಾವಿದರು ‘ಕೆಂಡ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.