ಚಿತ್ರದುರ್ಗ: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ನವೆಂಬರ್ 01 ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ನಾಳೆ ನವೆಂಬರ್ 01 ರಂದು ಹೆಚ್ಚು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳು ನಡೆದಿದೆ.
ಕರ್ನಾಟಕ 50 ವರ್ಷಗಳ ಸಂಭ್ರಮ ಆಚರಿಸುತ್ತಿರುವುದರಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿಶೇಷ ಮೆರುಗು ಬಂದಿದೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಸಮಾರಂಭ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೇದಿಕೆಯು ಹಳದಿ ಮತ್ತು ಕೆಂಪು ಬಣ್ಣದ ಬಗೆ ಬಗೆಯ ವಿನ್ಯಾಸದಿಂದ ಅಲಂಕೃತಗೊಂಡಿದ್ದು, ಇಡೀ ಮೈದಾನದಲ್ಲಿ ಕನ್ನಡ ಬಾವುಟ, ಕನ್ನಡ ನಾಡು ನುಡಿ ಬಿಂಬಿಸುವ ರೀತಿ ಮೈದಾನ ಸಜ್ಜುಗೊಂಡಿದ್ದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.
ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಅಂದು ಬೆಳಿಗ್ಗೆ 7.30 ಕ್ಕೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯು ನಗರದ ನೀಲಕಂಠೇಶ್ವರ ದೇಗುಲದಿಂದ ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ ನಮ್ಮ ನಾಡು, ನುಡಿ, ಸಂಸ್ಕøತಿ ಬಿಂಬಿಸುವ ವಿವಿಧ ವೈವಿಧ್ಯಮಯ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು, ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ನಾಳೆ ಬೆಳಿಗ್ಗೆ 9ಕ್ಕೆ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯೋತ್ಸವ ಸಂದೇಶ ನೀಡುವರು.