ಮೈಸೂರು: ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಸುವರ್ಣ ಕರ್ನಾಟಕ ಕನ್ನಡ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಮ.ನ. ಲತಾಮೋಹನ್ ರವರು ಹಲವಾರು ಪ್ರಥಮಗಳಿಗೆ ಕನ್ನಡ ಹಾಗೂ ಕರುನಾಡು ಸಾಕ್ಷಿಯಾಗಿದೆ. ಭಾರತದಲ್ಲಿ ಅತಿಹೆಚ್ಚು ಜ್ನಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು ಆದರೆ ಇಂದು ಮನೆಗಳಲ್ಲಿ ಹಾಗೂ ಶಾಲೆಗಳಲ್ಲಿ ನಾವು ಮಕ್ಕಳೊಂದಿಗೆ ಕೇವಲ ಇಂಗ್ಲಿಷ್ ನಲ್ಲೆ ಮಾತನಾಡುತ್ತೇವೆ. ಮಕ್ಕಳು ಕನ್ನಡ ಬಳಸಬೇಕು, ಕನ್ನಡದ ಇತಿಹಾಸ, ಸಾಹಿತ್ಯ ಎಲ್ಲವನ್ನೂ ತಿಳಿಯ ಬೇಕು ಹಾಗಾದರೆ ಮಾತ್ರ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವದ ಅರಿವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕರಾದ ಸುರೇಶ್ ಋಗ್ವೇದಿ ಮೈಸೂರು ಮಹಾರಾಜರ ಕೊಡುಗೆ ಅಪಾರವಾದುದು ಅವರು ಮಾಡಿದ ಅಭಿವೃದ್ಧಿ, ಆಡಳಿತ ದಿಂದ ನಾವು ಇಷ್ಟು ಮುಂದುವರೆದಿದ್ದೇವೆ. ಹಲವಾರು ರಾಷ್ಟ್ರ ಪುರುಷರ ತ್ಯಾಗ ಬಲಿದಾನದಿಂದ ನಾವು ಇಂದು ನೆಮ್ಮದಿಯಾಗಿ ಇದ್ದೇವೆ. ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಅಂದು ಮಾಡಿದ ಏಕೀ ಕರಣದ ಹೋರಾಟದ ಫಲ ಇಂದು ನಾವು ನೋಡುತ್ತಿದ್ದೇವೆ. ಕನ್ನಡ ಭಾಷೆಯ ಹಾಗೂ ರಾಷ್ಟ್ರದ ಸೇವೆಗೆ ಪ್ರತಿ ನಾಗರೀಕನು ಸ್ವ ಇಚ್ಚೆಯಿಂದ ಮುಂದೆ ಬರಬೇಕು ಹಾಗೆ ಬಂದಾಗಲೆ ನಾವು ಸಮರ್ಥ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.

ಸಾಲು ಗಿಡಗಳ ಸಾಧಕ ಸಿ.ಎಂ ವೆಂಕಟೇಶ್ ಮಾತನಾಡಿ ಪರಿಸರದ ಅರಿವು ಮೂಡಿಸಿದರು ದೆಹಲಿ ಮಹಾನಗರ ಇಂದು ಉಸಿರಾಡಲು ಆಗದಂತೆ ಆಗುತ್ತಿದೆ ನಮ್ಮ ಭಾಗ್ಯ ಕರ್ನಾಟಕ ಉತ್ತಮವಾದ ಅರಣ್ಯ ಸಂಪತ್ತು ಹೊಂದಿದೆ ಪ್ರತಿ ಮನುಷ್ಯನೂ ಸಹ ಗಿಡ ನೆಡುವ ಮೂಲಕ ಭಾರತವನ್ನು ಸಸ್ಯ ಶ್ಯಾಮಲೆಯಾಗಿಯೂ ಕರ್ನಾಟಕವನ್ನು ನಿತ್ಯ ಹರಿದ್ವರ್ಣವಾಗಿಯೂ ಮಾಡಬೇಕು ಇದೇ ನಾವು ಮುಂದಿನ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಹೆಜ್ಜಿಗೆ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿಕೊಂಡ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇವತ್ತಿನ ಮಕ್ಕಳ ಕೈಯಲ್ಲಿ ಇದೆ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್ ಮಾತನಾಡಿ ಮನೆಗಳಲ್ಲಿ ಎಲ್ಲರೂ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿ, ಪ್ರತಿಯೊಬ್ಬರು ಸಹ ಪ್ರತಿದಿನ ಕನ್ನಡ ದಿನಪತ್ರಿಕೆಗಳನ್ನು ಮಕ್ಕಳು ಓದುವಂತೆ ಮಾಡಬೇಕು. ದಿನ ಪತ್ರಿಕೆ ಓದುವುದು ಮಕ್ಕಳಿಗೆ ಹವ್ಯಾಸವಾದರೆ ಅವರಿಗೆ ಸಾಮಾಜಿಕ ಜ್ಞಾನ ತಾನಾಗಿಯೇ ಬರುತ್ತದೆ. ಇದು ಮಕ್ಕಳ ಬೆಳವಣಿಗೆಗೆ ಪೂರಕ ಎಂದು ತಿಳಿಸಿದರು.
ವಿಶ್ವ ದಾಖಲೆ ನಿರ್ಮಿಸಿರುವ ಬಾಲಕ ಪೃಥು ಪಿ ಅದ್ವೈತ್ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಶಿವಮೊಗ್ಗದ ಈಸೂರು ಗ್ರಾಮ ಸ್ವಾಂತಂತ್ರ್ಯ ಪಡೆದ ಮೊದಲ ಹಳ್ಳಿ ಹೇಗಾಯಿತೆಂದು ತಿಳಿಸಿದರು.
ಮಾತನಾಡುವ ಗೊಂಬೆ ಕಲಾವಿದೆ ಎಂ.ಕಾವ್ಯ ಮಾತನಾಡುವ ಗೊಂಬೆಯ ಮೂಲಕ ಹಾಸ್ಯದ ಲೋಕವನ್ನೇ ಸೃಷ್ಟಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯಲ್ಲಿ ವಿಶೇಷ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಪುನೀತ್ ನಿರೂಪಣೆ ಮಾಡಿದರು, ಕುಮಾರಿ ಮೈತ್ರೇಯಿ ಪ್ರಾರ್ಥನೆ, ಮೂಕಾಂಬಿಕಾ ಸತ್ಸಂಗ ಬಳಗದಿಂದ ನಾಡಗೀತೆ, ವರ್ಷ ಭರತನಾಟ್ಯ, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಮಕ್ಕಳಿಂದ ಸಾಮೂಹಿಕ ನೃತ್ಯ, ವೆಂಟಕರಾಘವ ಹಾಡು ಹೇಳಿದರು, ಪೃಥು ಪಿ ಅದ್ವೈತ್ ಜಾನಪದ ಗಾಯನ, ಹರಣ್ ಪಿ ಜೈನ್ ಕರಾಟೆ ಪ್ರದರ್ಶನ, ಸೋನಾ ಸಹೋದರಿಯರಿಂದ ನೃತ್ಯ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಮಹಿಳೆಯರಿಂದ ಸಾಮೂಹಿಕ ಜಾನಪದ ನೃತ್ಯ ಪ್ರದರ್ಶನ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೈಸೂರಿನ ಗೌರವ ಕಾರ್ಯದರ್ಶಿ ಮ.ನ ಲತಾ ಮೋಹನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಹೆಜ್ಜಿಗೆ, ಇತಿಹಾಸ ತಜ್ಞ ಸುರೇಶ್ ಋಗ್ವೇದಿ, ಸಾಲುಮರದ ವೆಂಕಟೇಶ್, ಸಮಿತಿಯ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ಪುನೀತ್, ಪಾರ್ಶ್ವನಾಥ ಜೈನ್, KEB ಮಂಜುನಾಥ್, ಮೋಹನ್, ರಚನಾ, ಪೂಜಾ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.