ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿಯ ಶಂಕರ್ ನಾಗ್ ಆಟೋ ಮಾಲೀಕರು ಮತ್ತು ಚಾಲಕರು ಸಂಘ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ನಟ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಿಲ್ದಾಣದಲ್ಲಿನ ಆಟೋ ಮಾಲೀಕರು ಹಾಗೂ ಚಾಲಕರು ತಮ್ಮ ಆಟೋಗಳಿಗೆ ಕನ್ನಡ ಬಾವುಟ ಕಟ್ಟಿ ಬಗೆ ಬಗೆಯ ಹೂಗಳಿಂದ ಅಲಂಕರಿಸಿ ವಿಶೇಷವಾಗಿ ಸಿಂಗರಿಸಿದ್ದರು.

ಆಟೋ ನಿಲ್ದಾಣದ ಸುತ್ತ ಕನ್ನಡದ ಸಾಹಿತಿ ಚಿತ್ರನಟರು ಹಾಗೂ ವಿವಿಧ ಕ್ಷೇತ್ರದ ಸಾಧಕರ ಭಾವಚಿತ್ರಗಳನ್ನು ಹಾಕಿ ಕನ್ನಡ ನಾಡು ನುಡಿ ಸಾರುವ ಚಿತ್ರಗೀತೆಗಳನ್ನು ಧ್ವನಿವರ್ಧಕ ಮೂಲಕ ಹಾಕಿ ರಂಜಿಸಲಾಯಿತು.

ತಾಯಿ ಭುವನೇಶ್ವರಿ ಹಾಗೂ ಶಂಕರ್ ನಾಗ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದ ಬಳಿಕ ಸಿಹಿ ವಿತರಿಸಿ ಎಲ್ಲಾ ಆಟೋಗಳು ಬಿ.ಎಂ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಪ್ರತಿಯೊಬ್ಬರು ಕನ್ನಡ ನಾಡು ನುಡಿ ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು, ಶಂಕರ್ ನಾಗ್ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಕನ್ನಡಪರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಶಿವಣ್ಣ, ನಟೇಶ್, ಕಾರ್ತಿಕ್, ಸಂತೋಷ್, ಅಭಿ, ರವಿ, ಪಚ್ಚಿ, ನಟರಾಜ್, ಸ್ವಾಮಿ ಮತ್ತು ಚಾಲಕರು ಇದ್ದರು.



