Monday, April 21, 2025
Google search engine

Homeರಾಜ್ಯಸುದ್ದಿಜಾಲಹೆಬ್ಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಹೆಬ್ಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಸಾಲಿಗ್ರಾಮ: ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೊನ್ನೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಸ್.ಎಂ.ಶಿವಣ್ಣ ಹೇಳಿದರು.

ಅವರು ತಾಲೂಕಿನ ಹೆಬ್ಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೃಷ್ಣರಾಜನಗರ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕನ್ನಡ ನಾಡು, ನುಡಿ, ನೆಲ, ಜಲ ಭಾಷೆಯ ಬಗೆಗಿನ ಕಾರ್ಯಕ್ರಮಗಳನ್ನು ನಾಡಿನೆಲ್ಲೆಡೆ ಸರ್ವರು ಒಟ್ಟಾಗಿ ಸೇರಿ ಆಚರಿಸಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕು ವಿವಿಧ ವಿಷಯಗಳ ಬಗ್ಗೆ ಅರಿವನ್ನು ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಪ್ರತಿ ವರ್ಷವೂ ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡದೆ ಪ್ರತಿನಿತ್ಯ ಆಚರಣೆ ಮಾಡುವ ಮೂಲಕ ನಿತ್ಯೋತ್ಸವವನ್ನಾಗಿ ಆಚರಿಸಬೇಕು. ಆಡಂಬರದಿಂದ ಕೂಡಿರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬದಲು ಜನಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ರಮಗಳು, ನಾಡು ನುಡಿ ನೆಲ ಜಲದ ಬಗ್ಗೆ, ಕರುನಾಡು ಕಟ್ಟಿದ ಗಣ್ಯರುಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುವ ಮೂಲಕ ಅರ್ಥಗರ್ಭಿತವಾಗಿ ಆಚರಣೆ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎಂದರು.

ಈ ನಿಟ್ಟಿನಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೆ.ಆರ್.ನಗರ ತಾಲೂಕು ಘಟಕವು ೨೦೨೩ ನೇ ಸಾಲಿನಲ್ಲಿ ತಾಲೂಕಿನ ಹಲವು ಕಡೆಗಳಲ್ಲಿ ಹತ್ತಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ಸಾಮಾಜಿಕ ಸೇವಾ ಕಾರ್ಯ ಮಾಡುವ ಮನಸುಳ್ಳ ಇತರೆ ಸಂಘಟನೆಗಳಿಗೆ ಈ ಪ್ರೆಸ್ ಕ್ಲಬ್ ನಿಜಕ್ಕೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರೆಸ್ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವಿವಿಧ ಸ್ಪರ್ಧೆಗಳ ವಿಜೇತರು: ಕನ್ನಡದ ಗಾದೆ ಬರೆಯುವ ಸ್ಪರ್ಧೆ ಕೀರ್ತನ – ಪ್ರಥಮ (೯ನೇ ತರಗತಿ), ಮೋನಿಕ – ದ್ವಿತೀಯ (೮ನೇ ತರಗತಿ), ಸಂಜಯ್ – ತೃತೀಯ (೮ನೇ ತರಗತಿ). ಕವಿಗಳು, ಸಾಹಿತಿಗಳು, ಲೇಖಕರ ಹೆಸರುಗಳ ಬರೆಯುವ ಸ್ಪರ್ಧೆ, ಬಿಂದು – ಪ್ರಥಮ (೮ನೇ ತರಗತಿ), ಲಕ್ಷ್ಮಿ- ದ್ವಿತೀಯ (೮ನೇ ತರಗತಿ), ಬಿಂದು – ತೃತೀಯ (೧೦ನೇ ತರಗತಿ). ಪ್ರಬಂಧ ಸ್ಪರ್ಧೆ – ಕನ್ನಡ ಭಾಷಾ ಉಳಿವಿಗೆ ವಿದ್ಯಾರ್ಥಿಗಳ ಪಾತ್ರ, ರಾಮ್ ಪ್ರಸಾದ್ – ಪ್ರಥಮ, ಜೀವನ್ – ದ್ವಿತೀಯ, ಕಾಂಚನ – ತೃತೀಯ (ಮೂವರು ಹತ್ತನೇ ತರಗತಿ ವಿದ್ಯಾರ್ಥಿಗಳು).

ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಸುನಿಲ್ ಕುಮಾರ್, ಪ್ರಭಾರ ಮುಖ್ಯ ಶಿಕ್ಷಕ ಜಿ.ಎ.ಪ್ರಕಾಶ್, ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಕೆ.ಆರ್.ಶ್ಯಾಮ್ ಸುಂದರ್, ಶಿಕ್ಷಕರುಗಳಾದ ಎಸ್.ಬಿ.ಮಂಜುನಾಥ, ಎಂ.ಜೆ.ಧರೆಶ್, ಎಸ್.ಮಮತ, ಹೆಚ್.ಎ.ಚೆನ್ನಕೇಶವ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular