ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ಹಾರನಹಳ್ಳಿ ಹೋಬಳಿ ಘಟಕ ಮತ್ತು ಆವರ್ತಿ ಗ್ರಾಮ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನ. 21 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾರನಹಳ್ಳಿ ಹೋಬಳಿ ಘಟಕ ಅಧ್ಯಕ್ಷರಾದ ಆವರ್ತಿ ಮಹದೇವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9 ಗಂಟೆಗೆ ಆವರ್ತಿ ಗ್ರಾಮದ ರಾಜಬೀದಿಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.
ಪಿರಿಯಾಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನವೀನ್ ಕುಮಾರ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ, ಆವರ್ತಿ ಗ್ರಾಮ ಘಟಕ ಅಧ್ಯಕ್ಷರಾದ ಎ.ಬಿ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ರಂಗಭೂಮಿ ಕಲಾವಿದರಾದ ಎಸ್.ಮುರುಗೇಶ್ ಪಾಲ್ಗೊಳ್ಳಲಿದ್ದಾರೆ.
ಮಂಡ್ಯ ಜಿಲ್ಲೆ ಪ್ರಖ್ಯಾತ ಹರಿಕಥೆ ವಿದ್ವಾಂಸರಾದ ಶಿವಾರ ಉಮೇಶ್ ಮತ್ತು ತಂಡದವರಿಂದ ಜಾನಪದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ, ಇದೇ ಸಂದರ್ಭ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಬೆಳಗ್ಗೆ 9 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ಕನ್ನಡ ಸಿರಿ ಸ್ನೇಹ ಬಳಗ ಆಶ್ರಯದಲ್ಲಿ ಕನ್ನಡ ಗೀತ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಸ್ ಲೋಕೇಶ್ ಸಾಗರ್ ಉದ್ಘಾಟನೆ ಮಾಡಲಿದ್ದಾರೆ, ಮಧ್ಯಾಹ್ನ 2 ಗಂಟೆಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾರ್ವಜನಿಕರಿಗೆ ಮಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ ಏರ್ಪಡಿಸಲಾಗಿದೆ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕನ್ನಡ ನಾಡು ನುಡಿ ಹಾಗೂ ಬದುಕಿನ ಮೌಲ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಕೆ ಭರತ್ ಅವರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.