ಮೈಸೂರು: ಕರ್ನಾಟಕದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆದು ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
ವರುಣಾ ಕ್ಷೇತ್ರದ ಮೆಲ್ಲಹಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾಷೆ ಎಂದರೆ ಸಂವಹನ ಮಾಧ್ಯಮ ಅಲ್ಲ, ಭಾಷೆ ಎಂದರೆ ಆ ರಾಜ್ಯದ ಜನರ ಇತಿಹಾಸ ಸಂಸ್ಕೃತಿ ಇರುತ್ತದೆ. ಭಾಷೆ ಕಳೆದುಕೊಂಡರೆ ಸಂಸ್ಕೃತಿಯನ್ನೇ ಕಳೆದುಕೊಂಡಂತೆ. ಕರ್ನಾಟಕದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿನ ಮೊದಲ ಭಾಷೆ ಕನ್ನಡ ಆಗಬೇಕು. ಕನ್ನಡದ ರಕ್ಷಣೆ ನಮ್ಮ ನಮ್ಮ ಮನೆಗಳಿಂದಲೇ ಆಗಬೇಕು. ರಾಜ್ಯದಲ್ಲಿರುವ ಪ್ರತಿಯೊಂದು ಶಾಲೆಯಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು.
ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾಗಬೇಕು. ಆಗ ಬೇರೆ ರಾಜ್ಯಗಳಿಂದ ವಲಸೆ ಬಂದವರೂ ಸಹ ಕನ್ನಡ ಕಲಿಯಬೇಕಾಗುತ್ತದೆ. ನಮ್ಮ ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ. ಕನ್ನಡಕ್ಕೋಸ್ಕರ ಹೋರಾಟ ಮಾಡಿದ ಮಹನೀಯರಿಂದ ಕರ್ನಾಟಕದ ಏಕೀಕರಣವಾಯಿತು. ಕನ್ನಡ ನಾಡು, ನುಡಿ, ಜಲ ಗಡಿ ವಿಷಯ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡವನ್ನು ರಕ್ಷಣೆ ಮಾಡಬೇಕು ಎಂದರು.
ಸಮಾರಂಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಬಿ.ಎಂ. ನಟರಾಜ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ನಿವೃತ್ತ ಪ್ರಾಂಶುಪಾಲ ಸಿದ್ದಯ್ಯ, ಇಓ ಗಿರಿಧರ್, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಸಿದ್ದಯ್ಯ, ಗಂಗನ ತಿಮ್ಮಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ಛಾಯ, ಸಕ್ಕಳ್ಳಿ ಬಸವರಾಜು, ಸಿದ್ದಯ್ಯ, ಸಿದ್ದಲಿಂಗನ ಗವಿ, ಉಮೇಶ್, ಯಜಮಾನರುಗಳು ಹಾಜರಿದ್ದರು.