ಮೈಸೂರು : ಮಾರ್ಚ್ ೩ ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ೧೯ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದ್ದು ಈ ಬಾರಿ ಡಾ ಹೆಚ್.ಸಿ. ಸತ್ಯನ್, ಕೆ.ಎಂ. ವಿರೇಶ್ ಮತ್ತು ಮೀರಾ ಶಿವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಎಸ್ ಒಯು ಕುಲಪತಿ ಪ್ರೊ.ವಿ. ಶರಣಪ್ಪ ಹಲಸೆ ತಿಳಿಸಿದರು.
ಈ ಬಾರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಕರಾಮುವಿ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತಿಯಲ್ಲಿ ತಾವು ಅಧ್ಯಕ್ಷತೆ ವಹಿಸುವುದಾಗಿ ವಿವರಿಸಿದರು.
ಘಟಿಕೋತ್ಸವದಲ್ಲಿ ಮೂವರು ಪಿಹೆಚ್‌ಡಿ ಸ್ವೀಕರಿಸಲಿದ್ದಾರೆ. ೩೦ ಚಿನ್ನದ ಪದಕ ಮತ್ತು ೩೭ ನಗದು ಬಹುಮಾನಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ೩೩೯೮ ಪುರುಷರು ಮತ್ತು ೪೪೭೧ ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೭೮೬೯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ. ವಿ. ಶರಣಪ್ಪ ಹಲಸೆ ತಿಳಿಸಿದರು.