ಮಂಡ್ಯ: ಇಂದು ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಆದೇಶ ಜಾರಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳಿಂದ ಬಂದ್ ಕರೆ ಹಿನ್ನೆಲೆ ಮಂಡ್ಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೈ-ಬೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹಾಗೂ ರೈಲುಗಳು ಸಂಚರಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಾಗೂ ಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಾರ್ಡರ್ ನಿಂದ ಮಂಡ್ಯ ತಾಲ್ಲೂಕಿನ ತೂಬಿನಕೆರೆ ಬಾರ್ಡರ್ ವರೆಗೆ ನಿಷೇಧ ಹೇರಲಾಗಿದೆ.
ಮಂಡ್ಯದ ಎಲ್ಲಾ ರೈಲು ನಿಲ್ದಾಣದಲ್ಲಿ ಹಾಗೂ ರೈಲು ಸಂಚರಿಸುವ ಪ್ರದೇಶದಲ್ಲಿ ಷರತ್ತು ವಿಧಿಸಿ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಭಾಷಣ, ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.
ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಷೋಷಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಆದೇಶ ನೀಡಿದ್ದಾರೆ.