ಮಂಡ್ಯ: ನಾಳೆ ಕರ್ನಾಟಕ ಬಂದ್ ಗೆ ಬೆಂಬಲ ನೀಡಿ ಮಂಡ್ಯ ಬಂದ್ ಮಾಡಲು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಕರೆ ನೀಡಿದೆ.
ಕಾವೇರಿಗಾಗಿ ಬಂದ್‌ಗೆ ಸಮಿತಿ ಕರೆ ನೀಡಿದ್ದು, ಬಂದ್‌ಗೆ ಎಲ್ಲಾ ಪ್ರಮುಖ ಸಂಘಟನೆಗಳಿಂದ ಬೆಂಬಲ ಘೋಷಿಸಿವೆ. ನಾಳೆ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ರೈತರು ಬಂದ್ ಮಾಡಲಿದ್ದಾರೆ.
ಮಂಡ್ಯ ನಗರದ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಹೋಟೇಲ್ ಗಳು, ಚಿತ್ರಮಂದಿರಗಳು, ಆಟೋ ಸಂಚಾರ, ಖಾಸಗಿ ಬಸ್ ಸಂಚಾರ ಬಂದ್ ಆಗಲಿದ್ದು, ಶಾಲಾ-ಕಾಲೇಜುಗಳಿಗೆ ಸಹ ಬಂದ್ ಗೆ ಮನವಿ ಮಾಡಲಾಗಿದೆ. ನಾಳೆ ಮೆಡಿಕಲ್, ಆಸ್ಪತ್ರೆ, ಹಾಲಿನ ಬೂತ್ ಮಾತ್ರ ತೆರೆದಿರಲಿವೆ.
ಬೆಳಿಗ್ಗೆ 9ಗಂಟೆಯಿಂದ ಮಂಡ್ಯದಲ್ಲಿ ಮಾನವಸರಪಳಿ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಮಂಡ್ಯದ ಸಂಜಯ್ ವೃತ್ತ, ಮಹಾವೀರ ವೃತ್ತ, ವಿವಿ ರೋಡ್, ಡಬಲ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲು ರೈತರು ತೀರ್ಮಾನಿಸಿದ್ದಾರೆ.
ಕಾವೇರಿಗಾಗಿ ಎಲ್ಲರು ಹೋರಾಟಕ್ಕೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ರೈತ ನಾಯಕಿ ಸುನಂದಾ ಜಯರಾಂ ಮನವಿ ಮಾಡಿದ್ದಾರೆ.