Tuesday, April 22, 2025
Google search engine

Homeರಾಜ್ಯನಾಳೆ ಕರ್ನಾಟಕ ಬಂದ್: ಇಂದು ಮಧ್ಯರಾತ್ರಿಯಿಂದಲೇ ೧೪೪ ಸೆಕ್ಷನ್ ಜಾರಿ

ನಾಳೆ ಕರ್ನಾಟಕ ಬಂದ್: ಇಂದು ಮಧ್ಯರಾತ್ರಿಯಿಂದಲೇ ೧೪೪ ಸೆಕ್ಷನ್ ಜಾರಿ

ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್ ಹಿರಿಯ ಅಧಿಕಾರಿ ಬಿ ದಯಾನಂದ, ನಾಳೆ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ಬೆಂಗಳೂರಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿಭಟನಾ ಮೆರವಣಿಗೆ, ರ್‍ಯಾಲಿಗಳಿಗೆ ಅವಕಾಶವಿರುವುದಿಲ್ಲ. ಬೆಂಗಳೂರಿನಲ್ಲಿ ಇಂದು ರಾತ್ರಿ ೧೨ ರಿಂದ ನಾಳೆ ರಾತ್ರಿ ೧೨ರವರೆಗೂ ೧೪೪ ಸೆಕ್ಷನ್ ಜಾರಿಯಿರಲಿದೆ. ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿರಲಿದೆ. ಸಂಘಟನೆಗಳ ಕಡೆಯವರಿಗೂ ಈ ಕುರಿತು ನೋಟಿಸ್ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.

ಬಂದ್ ಕರೆಗಳ ಕುರಿತು ಸುಪ್ರಿಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಬಂದ್ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಆಯೋಜಕರೆ ಹೊಣೆ ಆಗಿರುತ್ತಾರೆ. ಸ್ವಯಂ ಪ್ರೇರಿತವಾಗಿ ಬಂದ್‌ಗೆ ಅಡ್ಡಿಯಿಲ್ಲ. ಆದ್ರೆ ಬಲವಂತದ ಬಂದ್ ಮಾಡಿಸುವಂತಿಲ್ಲ. ನಗರದಲ್ಲಿ ಸಂಪೂರ್ಣವಾಗಿ ಎಲ್ಲಾ ಅಧಿಕಾರಿಗಳು ಬಂದೋಬಸ್ತ್‌ನಲ್ಲಿರುತ್ತಾರೆ. ಇದಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ, ಸಿಎಆರ್, ಗೃಹರಕ್ಷಕದಳದ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಪರಾಧ ಹಿನ್ನೆಲೆಯುಳ್ಳವರನ್ನ ವಶಕ್ಕೆ ಪಡೆದುಕೊಳ್ಳಲಿದ್ದೇವೆ. ಯಾವುದೇ ಸಿನಿಮಾ ಸ್ಟಾರ್ ನಟರ ಭಾಗಿಯಾಗುವ ಕುರಿತು ಇದುವರೆಗೂ ಮಾಹಿತಿಯಿಲ್ಲ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ನಾಳೆ ಕರ್ನಾಟಕ ಬಂದ್ ನಡೆಯಲಿದೆ. ಈ ಮೂಲಕ ಕನ್ನಡ ಹಾಗೂ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘ ಸಂಸ್ಥೆಗಳು ಒಂದೇ ವಾರದಲ್ಲಿ ಎರಡು ಬಂದ್ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿವೆ. ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯ ಸೇರಿ ವಿವಿಧ ಡ್ಯಾಂಗಳಲ್ಲಿ ನೀರು ಬರಿದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರ ಧೋರಣೆ ಖಂಡನೀಯ. ಕೂಡಲೇ ನೀರು ನಿಲ್ಲಿಸಿ ರಾಜ್ಯ ರೈತರ ಹಿತ ಕಾಪಾಡಲು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular