ಬೆಂಗಳೂರು : ಕರ್ನಾಟಕದ ಜೈವಿಕ ಆರ್ಥಿಕತೆಯು ೨೦೨೦-೨೨ರಲ್ಲಿ ೨೮ ಬಿಲಿಯನ್ ಡಾಲರ್ ಇದ್ದುದು ೨೦೨೩ರಲ್ಲಿ ೩೧ ಬಿಲಿಯನ್ ಡಾಲರ್ ತಲುಪಿದ್ದು ಸುಮಾರು ಶೇ. ೧೦.೭ರಷ್ಟು ಹೆಚ್ಚಳವಾಗಿದೆ, ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ರಾಜ್ಯಗಳಲ್ಲಿ ಒಂದಾದ ಕರ್ನಾಟಕ ೨೦೨೩ರಲ್ಲಿ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಹೂಡಿಕೆಗಳಲ್ಲಿ ಶೇ.೩೦ ಕ್ಕಿಂತ ಹೆಚ್ಚು ಆಕರ್ಷಿಸಿದ್ದು, ಇದು ಭಾರತದ ಜೈವಿಕ ಆರ್ಥಿಕತೆಗೆ ಶೇ.೨೧ರಷ್ಟು ಕೊಡುಗೆ ನೀಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಸೋಸಿಯೇಷನ್ ಆಫ್ ಬಯೋಟೆಕ್ನಾಲಜಿ ಲೆಡ್ ಎಂಟರ್ಪ್ರೈಸಸ್ ABLE ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜೈವಿಕ ಆರ್ಥಿಕ ವರದಿ-೨೦೨೪ ಬಿಡುಗಡೆ ಮಾಡಿ ಸಚಿವರು ಮಾತನಾಡುತ್ತಿದ್ದರು.
೨೦೩೦ ರ ವೇಳೆಗೆ ಜೈವಿಕ ಆರ್ಥಿಕತೆಯನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯೊಂದಿಗೆ ಜೈವಿಕ ಆರ್ಥಿಕತೆಯನ್ನು ೧೦೦ ಶತಕೋಟಿ ಡಾಲರುಗಳಿಗೆ ಏರಿಸುವುದು, ೩೦ ಶತಕೋಟಿ ಡಾಲರುಗಳಿಗೆ ಬಯೋಫಾರ್ಮಾ ಕೊಡುಗೆಗಳನ್ನು ಕೇಂದ್ರೀಕರಿಸುವುದು, ಜೈವಿಕ ಕೃಷಿ ಯನ್ನು ೧೫ ಶತಕೋಟಿ ಡಾಲರುಗಳಿಗೆ ವಿಸ್ತರಿಸುವುದು ಮತ್ತು ೩೦ ಶತಕೋಟಿ ಡಾಲರುಗಳಿಗೆ ಜೈವಿಕ ಕೈಗಾರಿಕಾ ಕೊಡುಗೆಗಳನ್ನು ಏರಿಸುವದರೊಂದಿಗೆ ನಾಲ್ಕು ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಸೋಸಿಯೇಷನ್ ಆಫ್ ಬಯೋಟೆಕ್ನಾಲಜಿ ಲೆಡ್ ಎಂಟರ್ಪ್ರೈಸಸ್ (ABLE) ಸಂಸ್ಥೆಯ ಅಧ್ಯಕ್ಷರಾದ ಜಿ.ಎಸ್.ಕೃಷ್ಣನ್ ಮಾತನಾಡಿ ಕರ್ನಾಟಕ ಜೈವಿಕ ಆರ್ಥಿಕ ವರದಿಯು ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ರಾಜ್ಯದ ಕಾರ್ಯಕ್ಷಮತೆ ಮತ್ತು ಭಾರತದ ಜೈವಿಕ ಆರ್ಥಿಕತೆಗೆ ನೀಡಿದ ಮಹತ್ವದ ಕೊಡುಗೆಯ ಕುರಿತು ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಿದರು.