ಬೆಂಗಳೂರು: ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ- 2025ಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಪ್ರತಿಯೊಂದು ರಾಜ್ಯಗಳೂ ತಮ್ಮ ಪ್ರಸ್ತಾವನೆಯನ್ನು ಜಿಎಸ್ಟಿ ಮಂಡಳಿಗೆ ಸಲ್ಲಿಸುತ್ತವೆ. ಆ ಆಧಾರದಲ್ಲಿ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನವಾದ ನಂತರ ಎಲ್ಲಾ ರಾಜ್ಯ ಆ ಪ್ರಸ್ತಾವನೆಯನ್ನು ಅಳವಡಿಕೊಳ್ಳುವುದು ವಾಡಿಕೆ. ಈ ವ್ಯವಸ್ಥೆ ಮುಂದುವರೆದರೆ ಮಾತ್ರ ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರಕು ಸೇವೆಗಳಿಗೆ ಸಂಬಂಧಿಸಿ ಕೆಲವು ತಿದ್ದುಪಡಿಗಳನ್ನು ತರಲಾಗಿದೆ.
ಕೆಲವರು input tax credit ಅನ್ನು ಅಕ್ರಮವಾಗಿ ದುರುದ್ದೇಶದಿಂದ ಪಡೆದುಕೊಳ್ಳುತ್ತಿದ್ದಾರೆ. ITC Refund scam ಗಳು ದೊಡ್ಡ ದೊಡ್ಡ ಪ್ರಮಾಣದಲ್ಲಿ ಆಗಿಂದಾಗ್ಗೆ ಪತ್ರಿಕೆಯಲ್ಲಿ ವರದಿಯಾಗುತ್ತಿರುತ್ತದೆ. ಅವುಗಳನ್ನು ವ್ಯವಸ್ಥೆಯಲ್ಲೇ ತಡೆಗಟ್ಟುವ ಪ್ರಯತ್ನ ಮಾಡಬೇಕು. ಒಬ್ಬೊಬ್ಬರನ್ನೇ ಹುಡುಕಿಹೋದರೆ ಅವರನ್ನು ಹಿಡಿಯಲು ಹರಸಾಹಸ ಪಡಬೇಕಾಗುತ್ತೆ. ಹಾಗಾಗಿ ಅವರು ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಹುಡುಕಿ ಅದನ್ನು ತಡೆಗಟ್ಟಲು ಕೆಲವು ಪ್ರಮುಖ ಕ್ರಮಗಳನ್ನು ಈ ತಿದ್ದುಪಡಿ ಮೂಲಕ ಜಾರಿಗೆ ತರಲು ಉದ್ದೇಶಿಸಲಾಗಿದೆ.
ತಂಬಾಕು –ಅಡಿಕೆ ಆಧಾರಿತ ಪದಾರ್ಥಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಸೋರಿಕೆ ಆಗುತ್ತಿದೆ. ಉದಾಹರಣೆಗೆ ಪಾನ್ ಮಸಾಲ ಗುಟ್ಕಾ ಮಾರಾಟ ಆಗ್ತಾ ಇರೋ ಪ್ರಮಾಣಕ್ಕೂ ನಮಗೆ ಲೆಕ್ಕಾ ಸಿಗ್ತಾ ಇರೋ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಇವರನ್ನು ಹುಡುಕುವುದು ಸಾಧ್ಯವೇ ಇಲ್ಲ. ಸಿರಸಿ ಹೊನ್ನಾಳಿ ದಾವಣಗೆರೆಯಿಂದ ನೂರಾರು ಲೋಡ್ ಅಡಿಕೆ ಹೋಗತ್ತೆ. ಆದರೆ ಮಾರಾಟಕ್ಕೂ ಇದಕ್ಕೂ ತಾಳೆನೇ ಆಗಲ್ಲ. ಅಡಿಕೆ ಲೋಡ್ಗಳು ಕರ್ನಾಟಕದಿಂದ, ಆಂಧ್ರ ಅಲ್ಲಿಂದ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶಕ್ಕೆ ತಲುಪುತ್ತದೆ. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ.
ದೇಶದ ಎಲ್ಲಾ ರಾಜ್ಯಗಳೂ ಈ ನಿಯಮವನ್ನು ಪಾಲಿಸಬೇಕಿದೆ. ಮುಂದಿನ ವಾರ ಜಿಎಸ್ಟಿ ಮೀಟಿಂಗ್ ಇದೆ. ಹೀಗಾಗಿ ಈ ತಿದ್ದುಪಡಿ ಇಲ್ಲದೆ ಅಲ್ಲಿಗೆ ಹೋಗುವುದು ಸರಿಯಲ್ಲ. ಅದೇ ಕಾರಣಕ್ಕೆ 2025ನೇ ಸಾಲಿನ ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ವಿಧೇಯಕ ವನ್ನು ಸದನದಲ್ಲಿ ಮಂಡಿಸಲಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.