ಚಿತ್ರದುರ್ಗ: ಕರ್ನಾಟಕ ಪೊಲೀಸ್ ಇತರೆ ರಾಜ್ಯಗಳನ್ನು ಹೋಲಿಸಿದಾಗ ದೇಶದಲ್ಲಿಯೇ ಅತ್ಯುತ್ತಮ ಹಾಗೂ ಆಧುನಿಕವಾದ ಸೌಲಭ್ಯಗಳನ್ನು ಹೊಂದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ಬಸವೇಶ್ವರ ನಗರದ ಪೊಲೀಸ್ ವಸತಿ ಗೃಹದಲ್ಲಿ ರಾಜ್ಯ ಪೊಲೀಸ್, ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಪೊಲೀಸ್ ಸಮುಚ್ಚಯ ಮತ್ತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ, ತಳಕು ಪೊಲೀಸ್ ಠಾಣೆಗಳ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ನಿರ್ಮಾಣ ಮಾಡಲಾಗಿರುವ ಕೆಲವು ಪೊಲೀಸ್ ಸ್ಟೇಷನ್‌ಗಳನ್ನು ಐಟಿ ಕಂಪನಿಗಳ ರೀತಿಯಲ್ಲಿ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ತಂತ್ರಜ್ಞಾನದ ಸಹಾಯದಿಂದ ಪ್ರಸ್ತುತ ದಿನಗಳಲ್ಲಿ ಪೊಲೀಸರು ಅಪರಾಧಿಗಳನ್ನು ಶೀಘ್ರವೇ ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಪ್ರಕರಣಗಳನ್ನು ತ್ವರಿತಗತಿಯಲ್ಲಿ ಭೇದಿಸುವಲ್ಲಿ ಸನ್ನದ್ಧರಾಗಿದ್ದಾರೆ ಎಂದರು.
ಪೊಲೀಸ್ ಗೃಹ ೨೦೨೫ ಕಾರ್ಯಕ್ರಮದಲ್ಲಿ ಇನ್ನೂ ೧೦ ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಪೊಲೀಸ್ ವಸತಿ ನಿಗಮದಲ್ಲಿ ರೂ.೬೦೦ ಕೋಟಿ ಅನುದಾನವಿದ್ದು, ಹೆಚ್ಚಿನ ರೀತಿಯಲ್ಲಿ ಸುಂದರವಾದ ಪೊಲೀಸ್ ಸಮುಚ್ಚಯ ನಿರ್ಮಾಣ ಮಾಡಲಾಗುವುದು ಎಂದರು. ದೇಶದ ಕಾನೂನು ವ್ಯವಸ್ಥೆ ರಕ್ಷಣೆ ಮಾಡಬೇಕಾದರೆ ಅದು ಪೊಲೀಸ್ ಅವರಿಂದ ಮಾತ್ರ ಸಾಧ್ಯ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆಯಾಗಿದೆ. ಕಾನೂನು ರಕ್ಷಣೆ ಮಾಡುವ ಅಧಿಕಾರ ಪೊಲೀಸ್ ಇಲಾಖೆಗೆ ನೀಡಲಾಗಿದೆ. ಹಾಗಾಗಿ ಪೊಲೀಸರನ್ನು ನಾವು ಸರಿಯಾಗಿ ನೋಡಿಕೊಳ್ಳುವ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು.