Friday, April 4, 2025
Google search engine

Homeರಾಜ್ಯಕರ್ನಾಟಕ ಮಹಿಳಾ ಉದ್ಯೋಗಿಗಳಿಗೆ ಸಿಗಲಿದೆ ವೇತನ ಸಹಿತ ಮುಟ್ಟಿನ ರಜೆ

ಕರ್ನಾಟಕ ಮಹಿಳಾ ಉದ್ಯೋಗಿಗಳಿಗೆ ಸಿಗಲಿದೆ ವೇತನ ಸಹಿತ ಮುಟ್ಟಿನ ರಜೆ

ಬೆಂಗಳೂರು: ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ 6 ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ನೀತಿ ರೂಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಮುಟ್ಟಿನ ರಜೆ ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಲಾದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ವರದಿ ಸಿದ್ಧಪಡಿಸಲು ಡಾ ಸಪ್ನಾ ಮುಖರ್ಜಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಅದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಚರ್ಚೆ ನಡೆಸುತ್ತೇವೆ. ಅನುಮೋದನೆಗಾಗಿ ಶಾಸಕಾಂಗದ ಮುಂದೆ ಪ್ರಸ್ತಾಪಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ.

ಖಾಸಗಿ ಕಂಪನಿಗಳಲ್ಲೇ ಮೊದಲು ಜಾರಿ

ಆರಂಭದಲ್ಲಿ ಖಾಸಗಿ ವಲಯಕ್ಕೆ ಮುಟ್ಟಿನ ರಜೆ ನೀತಿ ಪರಿಚಯಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪೂರ್ಣ ಪ್ರಮಾಣದಲ್ಲಿ ನೀತಿ ರೂಪಿಸಿದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೊಹ್ಸಿನ್ ಹೇಳಿದ್ದಾರೆ.

ಮುಟ್ಟಿನ ರಜೆ ವಿಚಾರವಾಗಿ ಒಂದು ನೀತಿಯನ್ನು ಹೊಂದುವ ಅಗತ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಅನುಗುಣವಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡುವುದರ ಸಾಧ್ಯಾಸಾಧ್ಯತೆ ಬಗ್ಗೆ ಗಮನಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಈ ವರ್ಷದ ಜುಲೈನಲ್ಲಿ ನಿರ್ದೇಶನ ನೀಡಿತ್ತು. ಉದ್ಯೋಗದಾತರು ಮುಟ್ಟಿನ ರಜೆ ನೀಡುವುದನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರಿಗೆ ಅನುಕೂಲವಾಗಬೇಕು. ಅದರ ಬದಲಿಗೆ ಮುಟ್ಟಿನ ರಜೆ ನೀಡುವುದರಿಂದ ಉದ್ಯೋಗಗಳಲ್ಲಿ ಅವರ ಭಾಗವಹಿಸುವಿಕೆಗೆ ಪ್ರತಿಕೂಲವಾಗದಂತೆ ಗಮನಹರಿಸಬೇಕು ಎಂದು ಕೋರ್ಟ್ ಹೇಳಿತ್ತು. ಮುಟ್ಟಿನ ರಜೆಯಿಂದ ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಿಬಿಟ್ಟರೆ ಎಂಬ ಆತಂಕವನ್ನೂ ಕೋರ್ಟ್ ವ್ಯಕ್ತಪಡಿಸಿತ್ತು.

ಕರ್ನಾಟಕದಲ್ಲಿ ಮುಟ್ಟಿನ ರಜೆ ನೀತಿ ರೂಪಿಸುವ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಸುಳಿವು ನೀಡಿದ್ದರು ಎನ್ನಲಾಗಿದೆ.

ಮುಟ್ಟಿನ ರಜೆ ಪ್ರಸ್ತಾವನೆ ಚರ್ಚೆ ಹಂತದಲ್ಲಿದೆ. ಸಚಿವರು ಆ ಬಗ್ಗೆ ನೀತಿ ರೂಪಿಸಲು ಚಿಂತನೆ ನಡೆಸಿದ್ದರು. ಕಾರ್ಮಿಕ ಇಲಾಖೆಯು ಕೆಲವೇ ದಿನಗಳಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಲಿದೆ. ಆ ನಂತರ ಅದು ಇಲಾಖೆ ಮತ್ತು ಸರ್ಕಾರಿ ಹಂತಗಳಲ್ಲಿ ಮುಂದುವರಿಯಲಿದೆ ಎಂದು ಕಾರ್ಮಿಕ ಆಯುಕ್ತ ಡಾ. ಎಚ್ಎನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

ಮುಟ್ಟಿನ ರಜೆ ಘೋಷಿಸಿದ ಮೊದಲ ರಾಜ್ಯ ಬಿಹಾರ

ಬಿಹಾರವು 1992 ರಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಘೋಷಿಸಿತ್ತು. ಆ ಮೂಲಕ ಮುಟ್ಟಿನ ರಜೆ ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿತ್ತು. ಅಲ್ಲಿ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆಯನ್ನು ಒದಗಿಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಮಹಿಳೆಯರಿಗೆ ಕೆಲವು ನಿಬಂಧನೆಗಳೊಂದಿಗೆ ಮುಟ್ಟಿನ ರಜೆ ನೀಡಲಾಗುತ್ತಿದೆ.

ಜಾಗತಿಕವಾಗಿ ಸ್ವೀಡನ್, ಇಟಲಿ, ದಕ್ಷಿಣ ಕೊರಿಯಾ, ತೈವಾನ್ ಮತ್ತು ಜಪಾನ್ ಮಹಿಳೆಯರಿಗೆ ಮುಟ್ಟಿನ ರಜೆಗಳನ್ನು ನೀಡುತ್ತವೆ.

RELATED ARTICLES
- Advertisment -
Google search engine

Most Popular