ಮೈಸೂರು: ವಿಶ್ವದ ಪ್ರಮುಖ ಪ್ರಾಚೀನ ಭಾಷೆಗಳಲ್ಲೊಂದಾದ ಸುಮಾರು ಮೂರು ಸಾವಿರ ವರ್ಷಗಳ ಸುಧೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಕರುಳ ಭಾಷೆಯಾಗಿದ್ದು ಈ ಸುಂದರ ಸುಲಲಿತ ಕನ್ನಡವು ಪ್ರತಿಯೊಬ್ಬರ ಕೊರಳ ಭಾಷೆಯಾಗಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ವಿದ್ಯಾರಣ್ಯಪುರಂನ ವಾಣಿ ವಿದ್ಯಾ ಮಂದಿರ ಶಾಲೆಯಲ್ಲಿ ೬೮ ನೇ ಕನ್ನಡ ರಾಜ್ಯೋತ್ಸವ ಮತ್ತು ೫೦ನೇ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಏರ್ಪಡಿಸಿದ್ದ ನುಡಿ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನಕ್ಕಾಗಿ ನಾವು ಎಷ್ಟೇ ಭಾಷೆಗಳನ್ನು ಕಲಿತರೂ ಕೂಡ ನಮ್ಮ ನೆಲದೊಡಲಿನ ಕನ್ನಡ ನುಡಿಯೇ ಪ್ರತಿಯೊಬ್ಬರಿಗೂ ಸರ್ವಸ್ವವೆಂದರು.
ತನ್ನ ಮುದ್ದು ಮುದ್ದಾದ ಸುಂದರ ಅಕ್ಷರಗಳಿಂದ ಲಿಪಿಗಳರಾಣಿ ಎಂದು ಕರೆಸಿಕೊಳ್ಳುವ ಕನ್ನಡ ಭಾಷೆ ಕಲಿಯುವವರಿಗೆ ಸುಲಿದ ಬಾಳೆಹಣ್ಣಿನಂತೆ ಅತ್ಯಂತ ಸುಲಭವಾಗಿದ್ದು ಕನ್ನಡೇತರರೂ ಕೂಡ ಬಹುಬೇಗ ಕನ್ನಡವನ್ನು ಕಲಿಯಬಹುದಾಗಿದೆ. ಅತ್ಯಂತ ಹೆಚ್ಚು ಎನ್ನುವಂತೆ ಸಾಹಿತ್ಯ ಕ್ಷೇತ್ರದಲ್ಲಿ ದಾಖಲಾರ್ಹ ಪ್ರತಿಷ್ಠಿತ ಎಂಟು ಜ್ಞಾನಪೀಠ ಪ್ರಶಸ್ತಿಗಳ ಸಾಹಿತ್ಯ ಸಾಧಕರನ್ನು ಪಡೆದಿರುವ ನಮ್ಮ ಕನ್ನಡಮ್ಮ , ಕಲೆ, ಸಾಹಿತ್ಯ, ಸಂಸ್ಕೃತಿ,ಸಂಗೀತ,ಜಾನಪದ,ವಿಜ್ಞಾನ,ಧಾರ್ಮಿಕ, ಕೃಷಿ, ಕ್ರೀಡೆ, ರಾಜಕೀಯ,ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೂರಾರು, ಸಾವಿರಾರು ಸಾಧಕರನ್ನು ಸೃಷ್ಟಿಸಿದ್ದಾರೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಇದರ ಮೂಲಕ ಏನು ಬೇಕಾದರೂ ಸಾಧಿಸ ಬಹುದೆಂಬುದನ್ನು ಕನ್ನಡದ ಸಾಧಕ ಮಹನೀಯರು, ಪ್ರತಿಭಾ ಸಂಪನ್ನರು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕನ್ನಡ ಎಂದೂ ನಶಿಸದ ಜೀವಂತ ಭಾಷೆ.ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವ ಹೊಣೆ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲಿದ್ದು ಸರ್ವರ ತಾಯಿಯಾಗಿರುವ ಕನ್ನಡಮ್ಮನ ಸಂರಕ್ಷಿಸುವತ್ತ ಪ್ರತಿಯೊಬ್ಬ ಕನ್ನಡಿಗರೂ ಕ್ರಿಯಾಶೀಲರಾಗಬೇಕೆಂದು ತಿಳಿಸಿದರು.
ಇದಕ್ಕೂ ಮೊದಲು ಖ್ಯಾತ ಕಲಾವಿದೆ ಹಾಗೂ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕನ್ನಡ ನುಡಿ ಸಂಭ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ವಿದ್ಯಾರ್ಥಿ ದಿಶೆ ಯಲ್ಲೇ ಮಾತೃ ಭಾಷಾಭಿಮಾನ ಬೆಳೆಸಿ ಕೊಳ್ಳ ಬೇಕೆಂದು ಹಿತವಚನ ಹೇಳಿದರು.
ಕಾವೇರಿ ಬಳಗದ ಅಧ್ಯಕ್ಷೆ, ವಿಶ್ರಾಂತ ಶಿಕ್ಷಕಿ ಎನ್. ಕೆ.ಕಾವೇರಿಯಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ನಾಡಾಭಿಮಾನವನ್ನು ಬಿಂಬಿಸುವಂತಹ ಕನ್ನಡ ಗೀತೆಗಳನ್ನು ಹಾಡಿದರು. ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಪರಶುರಾಮೇಗೌಡರು ಬಹುಮಾನ ವಿತರಿಸಿ ಅಭಿನಂದಿಸಿದರು. ಶ್ರೀವಾಣಿ ವಿದ್ಯಾ ಮಂದಿರದ ಆಡಳಿತಾಧಿಕಾರಿಗಳಾದ ಹೆಚ್. ಕೆ.ರಾಘವೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯೆ ಮತ್ತು ಕವಯತ್ರಿ ಹಾಗೂ ಗಾಯಕಿ ಡಾ.ಸ್ನೇಹಶ್ರೀ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ವಿಶ್ರಾಂತ ಶಿಕ್ಷಕರೂ ಆದ ಹಿರಣ್ಮಯಿ ಪ್ರತಿಷ್ಟಾನದ ಅಧ್ಯಕ್ಷ ಎ.ಸಂಗಪ್ಪ, ಮುಖ್ಯ ಶಿಕ್ಷಕ ಪರಶುರಾಮೇಗೌಡ, ಶಿಕ್ಷಕರಾದ ಶ್ರೀನಿವಾಸರಾವ್,ಎಂ.ಪ್ರಕಾಶ್, ಪವಿತ್ರಾ ಮುಂತಾದವರು ಉಪಸ್ಥಿತರಿದ್ದರು.



