ಕಾರವಾರ : ದೀಪಾವಳಿ ಹಬ್ಬದಂದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ.
ಉದಯ ಬಾಲಚಂದ್ರ ಹೆಗಡೆ (22), ತಾಯಿ ನರ್ಮದಾ ಬಾಲಚಂದ್ರ ಹೆಗಡೆ(50), ದಿವ್ಯಾ(25) ಮೃತ ದುರ್ದೈವಿಗಳು.
ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಉದಯ ಬಾಲಚಂದ್ರ ಹೆಗಡೆ ಊರಿಗೆ ಹಿಂತಿರುಗಿದ್ದರು. ಬಳಿಕ ಆತನ ಚಿಕಿತ್ಸೆಗಾಗಿ ತಾಯಿ ಮತ್ತು ಮಗಳು ಆಸ್ಪತ್ರೆ, ಮನೆ ಅಂತ ಅಲೆದಾಡುತ್ತಿದ್ದರು. ಉದಯ ಇತ್ತೀಚಿಗೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದು (ನ.14) ಬೆಳಗ್ಗೆ 6 ಗಂಟೆಗೆ ಉದಯ ಆತ್ಮಹತ್ಯೆ ಮಾಡಿಕೊಂಡರು.
ತಾಯಿ ನರ್ಮದಾ ಮತ್ತು ಸಹೋದರಿ ದಿವ್ಯಾ ಕಣ್ಣೀರು ಹಾಕುತ್ತಾ ಉದಯ ಅವರ ಶವದ ಪಕ್ಕದಲ್ಲೇ ಕುಳಿತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ತೆರಳಿದ ನರ್ಮದಾ ಮತ್ತು ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.