ಚನ್ನಪಟ್ಟಣ: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕ್ಷೀಣಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವ ಸಂದರ್ಭದಲ್ಲಿ ಸಹ ತಮಿಳುನಾಡಿನಲ್ಲಿ ಮೂರನೆ ಬೆಳೆಗೆ ನೀರು ಬಿಡುವ ಮೂಲಕ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಮತ್ತು ತಮಿಳುನಾಡು ನಮ್ಮ ರಾಜ್ಯಕ್ಕೆ ಮತ್ತೆ ಬರೆ ಎಳೆಯುತ್ತಿರುವುದು ಖಂಡನೀಯವಾಗಿದೆ ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು.
ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರ ಹೋರಾಟದ ಪ್ರತಿಜ್ಞೆ ಮಾಡಿದ್ದು ಗುರುವಾರ ನಡೆದ ಇಪ್ಪತ್ತೊಂಬನೆ ದಿನದ ಹೋರಾಟದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಜಲಾಶಯಗಳು ಸಂಪೂರ್ಣ ಖಾಲಿಯಾಗುತ್ತಿದ್ದು ಜೊತೆಗೆ ಮಳೆಯು ಸಂಪೂರ್ಣವಾಗಿ ಕ್ಷೀಣವಾಗಿದೆ. ಇಂತಹ ಸಂದರ್ಭದಲ್ಲಿ ಸಹ ೩ ನೇ ಬೆಳೆಗೆ ತಮಿಳುನಾಡಿಗೆ ಮತ್ತೆ ದಿನಕ್ಕೆ ೨೬೦೦ ಕ್ಯೂಸೆಕ್ಸ್ ನಂತೆ ೧೫ ದಿನಗಳ ಕಾಲ ನೀರನ್ನು ಬಿಡುವಂತೆ ಆದೇಶ ನೀಡಿರುವ ಕಾವೇರಿ ಪ್ರಾಧಿಕಾರದ ನಡೆ ಖಂಡನೀಯವಾಗಿದೆ. ಅಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಲೋಕಸಭಾ ಚುನಾವಣೆಯನ್ನು ಮುಂದಿಟ್ಟು ತಮಿಳುನಾಡಿಗೆ ನೀರು ರಿಸುತ್ತಿರುವ ಅನುಮಾನ ಕಾಡುತ್ತಿದೆ. ಈ ನಿಟ್ಟಿನಲ್ಲಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ಅವರು ರಾಜಕಾರಣವನ್ನು ಬದಿಗಿಟ್ಟು ಕುಡಿಯುವ ನೀರಿಗೆ ಹೆಚ್ಚು ಆಧ್ಯತೆ ನೀಡಲಿ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ರಾಜ್ಯ ಸರ್ಕಾರವು ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ಕುಡಿಯುವ ನೀರಿಗೆ ಆಧ್ಯತೆ ನೀಡಬೇಕು. ಜೊತೆಗೆ ಮುಂದೆ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಶೀಘ್ರವೇ ಅಡಿಗಲ್ಲು ಹಾಕಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ಜಗದಾಪುರ, ರಾಜ್ಯ ಉಪಾಧ್ಯಕ್ಷರಾದ ರಂಜಿತ್ ಗೌಡ, ಮತ್ತೀಕೆರೆ ವಿಎಸ್‌ಎಸ್‌ನ ಮಾಜಿ ಅಧ್ಯಕ್ಷ ರಮೇಶ್ ಹೊಟ್ಟಿಗನಹೊಸಹಳ್ಳಿ, ತಾಲ್ಲೂಕು ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ರಮೇಶ್ ಚಾಲಕ, ಪುಟ್ಟಪ್ಪಾಜಿ ನಿವೃತ್ತ ಶಿಕ್ಷಕ, ಆಟೋಘಟಕದ ಸಿದ್ದಪ್ಪಾಜಿ, ಮಂಜು, ಪುನೀತ್, ಸಿದ್ದಪ್ಪ ಪುರಿ ಅಂಗಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.