ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಗಡಿಯನ್ನು ಬಂದ್ ಮಾಡಿ ಊಟಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿತ್ತು.
ಊಟಿ ಜಿಲ್ಲಾಡಳಿತವನ್ನು ಚಾಮರಾಜನಗರ ಅಧಿಕಾರಿಗಳು ಸಂಪರ್ಕಿಸಿ ಪರಿಸ್ಥಿತಿ ಶಾಂತಿಯುತವಾಗಿರುವುದನ್ನು ತಿಳಿಸಿದರು. ಬೆಳಗ್ಗೆ ೮.೩೦ ರ ಬಳಿಕ ಕರ್ನಾಟಕ ವಾಹನಗಳು ಸೇರಿದಂತೆ ಎಲ್ಲಾ ರಾಜ್ಯದ ನೋಂದಣಿ ವಾಹನಗಳ ಓಡಾಟಕ್ಕೆ ಊಟಿ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ, ತಮಿಳುನಾಡು ವಾಹನಗಳನ್ನು ಕರ್ನಾಟಕ ಪ್ರವೇಶಿಸಿಲು ನಿರ್ಬಂಧ ಮುಂದುವರೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ ಚೆಕ್ ಪೋಸ್ಟ್‌ನಲ್ಲಿ ಎಲ್ಲಾ ರೀತಿಯ ವಾಹನಗಳನ್ನು ನಿರ್ಬಂಧಿಸಿ ಬಂದ್ ಮುಗಿಯುವ ತನಕ ವಾಹನಗಳು ಸಂಚರಿಸುವುದು ಬೇಡ ಎಂದು ಸೂಚಿಸಿದ್ದರು. ಆದರೆ, ಆದೇಶವನ್ನು ಈಗ ಮಾರ್ಪಟು ಮಾಡಿ ಕೇವಲ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕಕ್ಕೆ ತೆರಳುವುದು ಬೇಡ ಎಂದು ಊಟಿ ಜಿಲ್ಲಾಡಳಿತ ನಿರ್ಧರಿಸಿದೆ.
ಏಕಾಏಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಎರಡು ರಾಜ್ಯದ ವಾಹನ ಸವಾರರು ೨ ತಾಸು ಪರದಾಡುವಂತಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ವಾಹನ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.