ಮೈಸೂರು : ಶಿಥಿಲಾವಸ್ಥೆ ತಲುಪಿರುವ ಪಾರಂಪರಿಕ ಜಯಲಕ್ಷ್ಮೀ ವಿಲಾಸ್ ಜಾನಪದ ವಸ್ತುಸಂಗ್ರಹಾಲಯದ ಅಭಿವೃದ್ಧಿಗೆ ಅಮೆರಿಕ ರಾಯಭಾರ ಕಚೇರಿಯೊಂದಿಗೆ ಮೈಸೂರು ವಿವಿ ಒಪ್ಪಂದ ಮಾಡಿಕೊಂಡಿದೆ. ಚೆನ್ನೈನ ಅಮೆರಿಕ ರಾಯಭಾರ ನಿಧಿಯಿಂದ ಸಾಂಸ್ಕೃತಿಕ ಸಂರಕ್ಷಣೆಗೆ ಧನ ಸಹಾಯ ನೀಡಲಾಗಿದೆ. ನವೀಕರಣ ಮತ್ತು ಅಭಿವೃದ್ಧಿಗೆ ಅಂದಾಜು ೨.೪ ಕೋಟಿ (೨.೭ ಮಿಲಿಯನ್) ಅನುದಾನ ನೀಡಿದೆ.
ಅಮೆರಿಕದ ರಾಯಭಾರಿ ಕ್ರಿಸ್ಟೋಫರ ಹಾಡ್ಜಸ್ ಮತ್ತು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಒಪ್ಪಂದಕ್ಕೆ ಸಹಿ ಹಾಕಿದರು. ಬಳಿಕ ಮೊದಲ ಹಂತದ ಚೆಕ್ ಅನ್ನು ಸ್ವೀಕರಿಸಿದರು. ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಇಂಡಿಯಾ ಈಗಾಗಲೇ ಕಾಮಗಾರಿ ಆರಂಭಿಸಿದೆ. ಈ ಅನುದಾನದಡಿ ಕಟ್ಟಡದ ಪಶ್ಚಿಮ ಭಾಗ, ೬೫೦೦ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಯ ಜತೆಗೆ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ವಿವರಿಸಿದರು. ಹಿಂದೆ ಇನ್ಫೋಸಿಸ್ ಫೌಂಡೇಷನ್ ಅನುದಾನದಿಂದ ಛಾವಣಿ ಅಭಿವೃದ್ಧಿಪಡಿಸಲಾಗಿತ್ತು. ಅಮೆರಿಕದ ಸಹಾಯದೊಂದಿಗೆ ಅಭಿವೃದ್ಧಿಗೊಳ್ಳಲಿರುವ ಜಯಲಕ್ಷ್ಮೀ ವಿಲಾಸ್ ಅರಮನೆಯೂ ಪ್ರವಾಸಿಗರನ್ನು ಆಕರ್ಷಿಸಲಿದೆ. ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಕೇಂದ್ರವೂ ಆಗಲಿದೆ ಎಂದು ತಿಳಿಸಿದರು. ೨೦೧೨ರಲ್ಲಿ ಯುಎಸ್ ಕಾನ್ಸುಲೇಟ ಜನರಲ್ ಚೈನ್ನೈನಿಂದ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂರಕ್ಷಣೆ ಮತ್ತು ೪೦ ಸಾವಿರ ಪುರಾತನ ತಾಳೆಗರಿ ಹಸ್ತಪ್ರತಿಗಳು ಮತ್ತು ಪುಸಕ್ತಗಳ ಅಮೂಲ್ಯ ಸಂಗ್ರಹಕ್ಕಾಗಿ ಅನುದಾನ ಪಡೆಯಲಾಗಿದೆ ಎಂದು ಪ್ರೊ. ಲೋಕನಾಥ್ ವಿವರಿಸಿದರು.
ಚೆನ್ನೈನ ಅಮೆರಿಕದ ರಾಯಭಾರಿ ಕ್ರಿಸ್ಟೋಫರ್ ಡಬ್ಲ್ಯೂ ಹಾಡ್ಜಸ್ ಮಾತನಾಡಿ, ಜಯಲಕ್ಷ್ಮೀ ವಿಲಾಸ್ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣೆಗೆ ನೀಡಿರುವ ಬೆಂಬಲವು ಭಾರತದ ಜನರು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತು ಅಮೆರಿಕ ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಪುರಾವೆಯಾಗಿದೆ ಎಂದು ತಿಳಿಸಿದರು. ಕಳೆದ ೨೦ ವರ್ಷಗಳಲ್ಲಿ ಯುಎಸ್ ಮಿಷನ್ ಇಂಡಿಯಾದ ಎಎಫ್‌ಸಿಪಿ ನೀಡಿರುವ ಎರಡನೇ ಅತಿದೊಡ್ಡ ಮೊತ್ತವಾಗಿದೆ. ಇದರಿಂದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಸಂರಕ್ಷಿಸುವ ಬಗ್ಗೆ ಕಳಕಳಿ ಹೊಂದಿರುವ ತಜ್ಞರು, ವಾಸ್ತುಶಿಲ್ಪಿಗಳು, ವಿನ್ಯಾಸಕರು, ನುರಿತ ಕುಶಲಕರ್ಮಿಗಳನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದರು.
ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾ ಅಧ್ಯಕ್ಷೆ ಲತಾ ರೆಡ್ಡಿ ಮಾತನಾಡಿ, ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ೨೦೨೫ರಲ್ಲಿ ಪೂರ್ಣಗೊಳ್ಳಲಿದೆ. ಕಟ್ಟಡದ ವಾಸ್ತುಶಿಲ್ಪಕ್ಕೆ ಧಕ್ಕೆಯಾಗದಂತೆ ಕಾಮಗಾರಿ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದರು.
ಕುಲಸಚಿವೆ ವಿ.ಆರ್.ಶೈಲಜಾ ಮುಂತಾದವರಿದ್ದರು.