Saturday, April 19, 2025
Google search engine

Homeರಾಜ್ಯಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ

ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಮಂಡಳಿಗೆ ಶೀಘ್ರ ಕಾಯಕಲ್ಪ ಮಾಡುವುದಾಗಿ ತಿಳಿಸಿದ್ದಾರೆ.

ಮಂಡಳಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದರ ದೈನಂದಿನ ವ್ಯವಹಾರದಲ್ಲಿ ಸಚಿವನಾಗಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ತಾವು  ಈವರೆಗೆ ಭಾವಿಸಿದ್ದಾಗಿ ತಿಳಿಸಿರುವ ಅವರು, ಈಗ ಮಂಡಳಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಇಬ್ಬರು ಪರಸ್ಪರ ವೈಯಕ್ತಿಕ ದೋಷಾರೋಪಣೆಯಲ್ಲಿ ತೊಡಗಿ, ಮಾಧ್ಯಮಗಳಲ್ಲಿ ಅದು ಜಗಜ್ಜಾಹೀರಾಗಿದೆ. ಇದರಿಂದ ಮಂಡಳಿಯ ಘನತೆಗೂ ಚ್ಯುತಿಯಾಗಿದೆ. ಈ ಹಿನ್ನೆಲೆಯಲ್ಲಿ  ಕಾನೂನು ಅಡಿಯಲ್ಲಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದರು.

ಕಳೆದ 2 ದಿನಗಳಿಂದ ಆನೆಗಳನ್ನು ದಸರಾ ಮಹೋತ್ಸವಕ್ಕಾಗಿ ಕಾಡಿನಿಂದ ನಾಡಿಗೆ ಕರೆತರುವ ಕುರಿತಂತೆ ಮೈಸೂರಿನಲ್ಲಿ ಅಧಿಕೃತ ಸಭೆ ಇದ್ದ ಕಾರಣ ಮತ್ತು ಕಬಿನಿ ಹಿನ್ನೀರಿನ ಬಳಿ ಇರುವ ಅಂತರಸಂತೆ ವಲಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಗ್ಗಿಸಲು ಕಂದಕ, ಸೌರ ವಿದ್ಯುತ್ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಪರಿಶೀಲನೆಗೆ ತಾವು ತೆರಳಿದ್ದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ತತ್ ಕ್ಷಣ ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ವಿದ್ಯಮಾನಗಳ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ  ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಂದ ವರದಿ ತರಿಸಿಕೊಂಡಿದ್ದು, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ, ಕಾನೂನು ಚೌಕಟ್ಟಿನಲ್ಲಿ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ದಕ್ಷ ಹಾಗೂ ಪಾರದರ್ಶಕವಾಗಿ ಮಂಡಳಿ ಕಾರ್ಯ ನಿರ್ವಹಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular