ನಿರ್ಲಕ್ಷ ವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೆ.ವೆಂಕಟೇಶ್ ಎಚ್ಚರಿಕೆ
ಪಿರಿಯಾಪಟ್ಟಣ: ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ವಹಿಸಲು ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ನಿರ್ಲಕ್ಷ ವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು, ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ನೀಡಬೇಕು, ಅಕ್ರಮ ಮಧ್ಯ ಮಾರಾಟಕ್ಕೆ ತಡೆಯೋಡ್ಡಿ ಕಾನೂನು ಕ್ರಮ ಜರುಗಿಸಬೇಕು, ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು, ತಮ್ಮ ಇಲಾಖೆ ವರದಿಗಳ ಬಗ್ಗೆ ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿಳಂಬ ಮಾಡದೆ ಶೀಘ್ರ ಬಗೆಹರಿಸುವಂತೆ ಸೂಚಿಸಿದರು.
ಕೃಷಿ ಇಲಾಖೆ ಬಗ್ಗೆ ಜಂಟಿ ನಿರ್ದೇಶಕ ಬಿ.ಎಸ್ ಚಂದ್ರಶೇಖರ್ ಅವರು ಮಾಹಿತಿ ನೀಡಿ ಮಾತನಾಡಿ ತಾಲೂಕಿನಲ್ಲಿ ಪ್ರಮುಖವಾಗಿ ಮುಸುಕಿನ ಜೋಳ ಮತ್ತು ರಾಗಿ ಬೆಳೆ ನಷ್ಟವಾಗಿದ್ದು ರೈತರಿಗೆ ಪರಿಹಾರ ನೀಡುವಂತೆ ವರದಿ ಸಲ್ಲಿಸಲಾಗಿದೆ, ಜಿಲ್ಲೆಯಲ್ಲಿ ರಾಗಿ, ಮುಸುಕಿನ ಜೋಳ, ಹಲಸಂದೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನುಯಿದ್ದು ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ ಬರ ಪರಿಸ್ಥಿತಿ ಎದುರಿಸಲು ಪ್ರತಿ ವಾರಕ್ಕೊಮ್ಮೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದು ಕಡ್ಡಾಯ ಹಾಗೂ ಕುಡಿಯುವ ನೀರಿನ ಸೌಕರ್ಯ ಸಮಸ್ಯೆ ಎದುರಾಗದಂತೆ ಸ್ಥಳೀಯ ಆಡಳಿತ ನಿಗಾ ವಹಿಸಬೇಕು ಎಂದರು.
ಜಿ.ಪಂ ಸಿಇಒ ಗಾಯತ್ರಿ ಅವರು ಮಾತನಾಡಿ ಬರ ಪರಿಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿಸಲು ರೇಷ್ಮೆ, ಕೃಷಿ, ಅರಣ್ಯ ಇಲಾಖೆಗಳು ಎನ್ಆರ್ ಇಜಿ ಯೋಜನೆಯನ್ನು ಬಳಸಿಕೊಳ್ಳುವಂತೆ ಸೂಚಿಸಿದರು.
ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಕೃಷ್ಣಮೂರ್ತಿ ಅವರು ಮಾತನಾಡಿ ತಾಲ್ಲೂಕಿನ 10 ಕಡೆ ಕುಡಿಯುವ ನೀರಿಗೆ ತೀವ್ರ ಕೊರತೆಯಾಗಬಹುದು ಎಂಬ ಅಂದಾಜಿದೆ ಎಂದು ಮಾಹಿತಿ ನೀಡಿದಾಗ ಸಚಿವರು ಪ್ರತಿಕ್ರಿಯಿಸಿ ನೂತನವಾಗಿ ಕೊಳವೆ ಬಾವಿ ಕೊರೆಸಲು ಕ್ರಮವಹಿಸಿ ಎಂದರು.
ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಅವರು ಮಾತನಾಡಿ ತಾಲ್ಲೂಕಿನಲ್ಲಿ ಇದುವರೆಗೂ ಮೇವು ಕೊರತೆ ಕಂಡುಬಂದಿಲ್ಲ ಸರ್ಕಾರಕ್ಕೆ ನಾಲ್ಕು ಕಡೆ ಮೇವು ಬ್ಯಾಂಕ್ ತೆರೆಯಲು ಮತ್ತು ಗೋಶಾಲೆ ತೆರೆಯಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಪ್ರಶಾಂತ್ ಅವರು ಮಾತನಾಡಿ ತಾಲ್ಲೂಕಿನ 8 ಶಾಲೆಗಳಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲ ಎಂದು ವರದಿ ಬಂದಿದೆ ಈ ಬಗ್ಗೆ ಇಒ ಗಮನಕ್ಕೆ ತರಲಾಗಿದೆ ಎಂದಾಗ ಸಚಿವರು ಪ್ರತಿಕ್ರಿಯಿಸಿ ಕೂಡಲೇ 8 ಶಾಲೆಗಳಿಗೂ ಮಿನಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯಿತಿಗಳಿಂದ ಅಳವಡಿಸಲು ಕ್ರಮ ಕೈಗೊಳ್ಳಿ ಎಂದರು. ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಅರಣ್ಯ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ರೇಷ್ಮೆ ಇಲಾಖೆ ಡಿಡಿ ಮಂಜುಳಾ, ನೀರಾವರಿ ಇಲಾಖೆ ಎಸ್ ಇ ರಘುಪತಿ, ಇಇ ಎನ್.ಎಸ್ ದೇವೇಗೌಡ, ಜಿಲ್ಲಾ ಯೋಜನಾಧಿಕಾರಿ ಶುಭ, ತಾ.ಪಂ ಇಒ ಡಿ.ಬಿ ಸುನಿಲ್ ಕುಮಾರ್, ತಹಶೀಲ್ದಾರ್ ಕುಂ ಇ ಅಹಮದ್ ಹಾಗು ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.