Friday, April 18, 2025
Google search engine

Homeಸ್ಥಳೀಯಗ್ರಾ.ಪಂ ಅಧ್ಯಕ್ಷೆ ರತ್ನಶ್ರೀಧರ್ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.ಸಭೆ

ಗ್ರಾ.ಪಂ ಅಧ್ಯಕ್ಷೆ ರತ್ನಶ್ರೀಧರ್ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.ಸಭೆ


ಹನಗೋಡು: ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಶ್ರೀಧರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಮಟ್ಟದ ಕೆ.ಡಿ.ಪಿ.ಸಭೆ ನಡೆಸಲಾಯಿತು.
ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಶಿಕ್ಷಣ, ಪಶು ಇಲಾಖೆ, ನರೇಗಾ, ಸಾರಿಗೆ, ಅಬಕಾರಿ, ಚೆಸ್ಕಾಂ ಸೇರಿದಂತೆ ಅನೇಕ ಇಲಾಖೆಗಳಿಂದಾಗುತ್ತಿರುವ ಸಮಸ್ಯೆಗಳನ್ನು ಸದಸ್ಯರಾದ ಛಾಯಾಮಣಿ, ಜಯಲಕ್ಷ್ಮೀ, ಶಿವಣ್ಣ, ಸಂತೋಷ್, ಚನ್ನಯ್ಯ, ಮತ್ತಿತರರು ಬಿಡಿ ಬಿಡಿಯಾಗಿ ಬಿಚ್ಚಿಟ್ಟರು.
ಪಶುಆಸ್ಪತ್ರೆ ಅವ್ಯವಸ್ಥೆ: ಹನಗೋಡಿನ ಪಶು ಆಸ್ಪತ್ರೆಯ ಬಾಗಿಲನ್ನು ಸರಿಯಾಗಿ ತೆರೆಯುತ್ತಿಲ್ಲ. ಆವರಣ ಸ್ವಚ್ಚತೆ ಇಲ್ಲವೆಂಬ ಸದಸ್ಯರ ಪ್ರಶ್ನೆಗೆ ಸಿಬ್ಬಂದಿಕೊರತೆ ಇದೆ ಎಂಬ ಪಶು ಪರೀಕ್ಷಕ ರಾಜುರವರ ಉತ್ತರಕ್ಕೆ ಆಸ್ಪತ್ರೆಯಲ್ಲಿ ಡಿ.ದರ್ಜೆ ನೌಕರರಿದ್ದು, ಆವರಣವನ್ನು ಸ್ವಚ್ಚಗೊಳಿಸಬೇಕು. ಆಸ್ಪತ್ರೆ ತೆರೆದಿರಬೇಕೆಂದು ಅಧ್ಯಕ್ಷರು ತಾಕೀತು ಮಾಡಿದರು.
ಶಿಕ್ಷಕರ ಕೊರತೆ: ಹನಗೋಡು ಸರಕಾರಿ ಪ್ರೌಢಶಾಲೆಯಲ್ಲಿ ೩೨೦ವಿದ್ಯಾರ್ಥಿಗಳಿದ್ದು, ಕನ್ನಡ, ಇಂಗ್ಲಿಷ್, ವಿಜ್ಞಾನ ವಿಷಯಗಳ ಶಿಕ್ಷಕರಿಲ್ಲದೆ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ತೊಂದರೆಯಾಗಿದ್ದು, ನೇಮಕಕ್ಕೆ ಅಗತ್ಯ ಕ್ರಮವಹಿಸುವಂತೆ ಡಿಡಿಪಿಐ ಹಾಗೂ ಬಿ.ಇ.ಓ.ಗೆ ಮನವಿ ಮಾಡಲು ನಿರ್ಣಯಿಸಲಾಯಿತು.
ಹನಗೋಡಿನ ಸರಕಾರಿ ಉರ್ದು ಶಾಲೆಯ ಮೂರು ಕೊಠಡಿ ದುರಸ್ತಿ ಹಾಗೂ ಕಾಂಪೌಂಡ್‌ಗೆ ಸುಣ್ಣ-ಬಣ್ಣ ಹೊಡೆಸಿಕೊಡಬೇಕೆಂದು ಶಿಕ್ಷಕರ ಮನವಿಗೆ ಮುಂದಿನ ಅನುದಾನದಲ್ಲಿ ಸೇರಿಸುವುದಾಗಿ ಪಿಡಿಓ ತಿಳಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಸವಲತ್ತು ಹಾಗೂ ಕೃಷಿ ಸಂಬಂಧಿತ ಮಾಹಿತಿ ಪಡೆಯಲು ಬರುವ ರೈತರಿಗೆ ರೈತ ಸಂಪರ್ಕ ಕೇಂದ್ರದ ಲೆಕ್ಕ ಸಹಾಯಕ ಸರಿಯಾದ ಮಾಹಿತಿ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಆತನ ನಡವಳಿಕೆಯನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಬೇಕೆಂದು ಸಭೆಯಲ್ಲಿ ಸದಸ್ಯರು ಸೂಚಿಸಿದರು.
ಅಡುಗೆ ಮನೆ ನಿರ್ಮಿಸಿಕೊಡಿ: ಕಾಮಗೌಡನಹಳ್ಳಿ ಬೋರೆಯ ಶಾಲೆಗೆ ಕಾಂಪೌಂಡ್ ನಿರ್ಮಾಣವಾಗುತ್ತಿದ್ದು, ಅಡುಗೆ ಮನೆ ನಿರ್ಮಿಸಿಕೊಡುವಂತೆ ಮುಖ್ಯ ಶಿಕ್ಷಕ ಶಿವಮೂರ್ತಿಯವರ ಮನವಿಗೆ ನರೇಗಾ ಯೋಜನೆಯಡಿ ನಿರ್ಮಿಸಿಕೊಡಲಾಗುವುದೆಂದು ಅಧ್ಯಕ್ಷೆ ರತ್ನಶ್ರೀಧರ್ ಹಾಗೂ ಪಿಡಿಓ ರಾಮಣ್ಣ ಭರವಸೆ ಇತ್ತರು.
ನರೇಗಾ ಇಂಜಿನಿಯರ್ ಪವಿತ್ರ ನರೇಗಾ ಯೋಜನೆಯಡಿ ವಿವಿಧ ಇಲಾಖೆಯಿಂದ ನಡೆಸಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಬೋರೇಗೌಡ, ಸದಸ್ಯರು, ಪಿಡಿಓ ರಾಮಣ್ಣ, ಕಾರ್ಯದರ್ಶಿ ಬಸವರಾಜು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಗೈರಾದವರಿಗೆ ನೋಟೀಸ್: ಕೆಡಿಪಿ ಸಭೆಗೆ ಚೆಸ್ಕಾಂ, ಕೆ.ಎಸ್.ಆರ್.ಟಿ.ಸಿ, ಪೊಲೀಸ್, ಅಬಕಾರಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳ ಗೈರಿಗೆ ಗರಂ ಆದ ಸದಸ್ಯರು ಗೈರಾದ ಇಲಾಖೆ ಮುಖ್ಯಸ್ಥರಿಗೆ ನೋಟೀಸ್ ನೀಡುವಂತೆ ಸಭೆ ನಿರ್ಣಯಿಸಿತು. ಹನಗೋಡು ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪನವರಿಗೆ ಮುಂದಿನ ಸಭೆಗೆ ಮಾಶಾಸನ ಮಂಜೂರಾತಿ, ವಿತರಣೆ ಇನ್ನಿತರೆ ಯೋಜನೆಗಳ ಸಂಬಂಧ ಸಮಗ್ರ ಮಾಹಿತಿಯೊಂದಿಗೆ ಆಗಮಿಸುವಂತೆ ಅಧ್ಯಕ್ಷರು ಸೂಚಿಸಿದರು.


RELATED ARTICLES
- Advertisment -
Google search engine

Most Popular