ಮಡಿಕೇರಿ : ಇತ್ತೀಚಿನ ವರ್ಷಗಳಲ್ಲಿ ಕೆಲವು ಯುವಜನರು ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ನಿಯಂತ್ರಣ ಮಾಡಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಸಹಯೋಗದಲ್ಲಿ ಪೊಲೀಸ್ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕುಶಾಲನಗರ ಶಕ್ತಿಧಾಮ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ವತಿಯಿಂದ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಬಳಿ ಇರುವ ಸಭಾಂಗಣದಲ್ಲಿ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಮಾದಕ ವಸ್ತು ಬಳಕೆ ನಿಯಂತ್ರಣ ಕುರಿತು ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
?ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ೩೫ ರಿಂದ ೪೦ ಪ್ರಕರಣಗಳನ್ನು ಪತ್ತೆ ಹಚ್ಚಿ, ೬೭ ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಯುವ ಜನರು ಮಾದಕ ವಸ್ತುಗಳ ಚಟಕ್ಕೆ ತುತ್ತಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಲಹೆ ಮಾಡಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲರ ಆರೋಗ್ಯ ಚೆನ್ನಾಗಿದ್ದಲ್ಲಿ ಕುಟುಂಬದ ನಿರ್ವಹಣೆ ಉತ್ತಮವಾಗಿರುತ್ತದೆ. ಇದರಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಯಾರೂ ಸಹ ಮರೆಯುವಂತಿಲ್ಲ ಎಂದು ಹೇಳಿದರು. ಗಾಂಜಾ, ಹೆರಾಯಿನ್, ಬ್ರೌನ್ ಸುಗರ್, ಚರಾಸ್, ಎಲ್‌ಎಸ್‌ಡಿ ಮತ್ತಿತರ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳ ಸಂಬಂಧ ಸರಿಯಾದ ತನಿಖೆ ಮಾಡಿ, ವರದಿ ಸಲ್ಲಿಸುವಂತಾಗಬೇಕು ಎಂದು ಸುಂದರರಾಜ್ ಅವರು ಹೇಳಿದರು. ತಮ್ಮ ತಮ್ಮ ಪೊಲೀಸ್ ಠಾಣಾ ಸರಹದ್ದಿನಲ್ಲಿ ಜಾಗೃತಿ ಮೂಡಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ದುಶ್ಚಟದಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಗೆ ತಕ್ಕಂತೆ ದುಷ್ಪರಿಣಾಮಕ್ಕೆ ತುತ್ತಾಗುವುದು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣ ಮಾಡಬೇಕು ಎಂದರು. ರಾಜ್ಯ ಮಟ್ಟದ ಸಮನ್ವಯ ಸಂಸ್ಥೆಯ ಯೋಜನೆಯ ಸಂಯೋಜಕರಾದ ಶೈಲಶ್ರೀ ಅವರು ಮಾತನಾಡಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಸಮಾಜವನ್ನು ನಶ ಮುಕ್ತ ಮಾಡಲು ಶ್ರಮಿಸಬೇಕು. ಯೋಗ, ಧ್ಯಾನ, ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕವಾಗಿ ಪ್ರತಿಯೊಬ್ಬರೂ ಸದೃಢರಾಗಿರಬೇಕು. ಉತ್ತಮ ಜೀವನ ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಹೇಳಿದರು.
ಮನೋ ವೈದ್ಯರಾದ ಡಾ.ಡೆವಿನ್ ಲಿನೇಕರ್ ಕಾರ್ಕಡ ಅವರು ಮಾತನಾಡಿ ದುಶ್ಚಟಕ್ಕೆ ತುತ್ತಾದಲ್ಲಿ ಆರೋಗ್ಯವನ್ನು ಕೆಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮಾನಸಿಕ ಅಸ್ವಸ್ಥತೆಯಿಂದ ಜೀವನ ಪೂರ್ತಿ ನರಳಬೇಕಾಗುತ್ತದೆ ಎಂದು ಹೇಳಿದರು.
ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ತಿಳಿದು ಇತರರಿಗೂ ಮಾಹಿತಿ ನೀಡುವಂತಾಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆಯ ಕಲ್ಯಾಣಾಧಿಕಾರಿ ವಿಮಲ ಅವರು ಮಾತನಾಡಿದರು. ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಅವರು ಪ್ರತಿಜ್ಞಾ ವಿದಿ ಬೋಧಿಸಿದರು. ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಹಾಗೂ ದುಶ್ಚಟಗಳನ್ನು ತಡೆಯುವ ಜಾಗೃತಿ ಹಾಗೂ ಸದಾಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿಯನ್ನು ತಿಳಿದುಕೊಂಡಿದ್ದೇನೆ.
ಆದರ್ಶ ವ್ಯಕ್ತಿಯ ಗುಣನಡತೆಗಳು, ಮಾನವೀಯ ಮೌಲ್ಯ ಮತ್ತು ಭಾರತೀಯ ಪರಂಪರೆ, ಶಿಷ್ಟಾಚಾರಗಳ ಬಗ್ಗೆ ಈ ದಿನ ನಾನು ತಿಳಿದುಕೊಂಡಿದ್ದೇನೆ. ಇವುಗಳನ್ನು ನನ್ನ ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತೇನೆ. ನಾನು ಮಾದಕ ವಸ್ತುಗಳ ಸೇವನೆ ಮಾಡುವುದಿಲ್ಲ. ಜೊತೆಗೆ ನಾನಿರುವ ಸುತ್ತ ಮುತ್ತಲಿನ ಪರಿಸರದಲ್ಲಿ ಈ ಕುರಿತು ಅರಿವು ಮೂಡಿಸುತ್ತೇನೆ. ಹಾಗೂ ಈ ದೇಶದ ಸತ್ಪ್ರಜೆಯಾಗಿ ಬಾಳುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ. ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್, ಪೊಲೀಸ್ ಠಾಣಾ ಅಧಿಕಾರಿಗಳು ಇತರರು ಇದ್ದರು.