ಪಿರಿಯಾಪಟ್ಟಣ: ಸಮಾಜಕ್ಕೆ ಹಾಗೂ ಜನತೆಗೆ ಉತ್ತಮ ಆಡಳಿತ ಮತ್ತು ನಿಶ್ವಾರ್ಥ ಸೇವೆ ನೀಡಿದರೆ ಜನಮಾನಸದಲ್ಲಿ ಉಳಿಯುತ್ತಾರೆ ಎಂಬುದಕ್ಕೆ ನಾಡಪ್ರಭು ಕೆಂಪೇಗೌಡರೆ ಸಾಕ್ಷಿ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ ತಿಳಿಸಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೪೦ ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಂಪೇಗೌಡರು ಬೆಂಗಳೂರನ್ನು ಕಟ್ಟುವ ಮೂಲಕ ಬೆಂಗಳೂರಿನ ಕೀರ್ತಿಯನ್ನು ದಶಧಿಕ್ಕುಗಳಿಗೂ ಪರಿಹರಿಸುವಂತೆ ಮಾಡಿದರು. ಸ್ವಾರ್ಥ ಬಿಟ್ಟು ಸಮಾಜ ಮತ್ತು ಜನರ ಸೇವೆ ಮಾಡಿದ ವ್ಯಕ್ತಿ ಕೆಂಪೇಗೌಡ. ಅವರ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ.ಅವರ ಮೇಧಾವಿ ಶಕ್ತಿಗೆ ಯಾರೂ ಸರಿಸಾಟಿ ಇಲ್ಲ. ೫೦೦ ವರ್ಷದ ಹಿಂದೆಯೇ ನಗರ ನಿರ್ಮಾಣದ ಚಿಂತನೆ ಮಾಡಿದ್ದ ಅವರು ತಮ್ಮ ತನು, ಮನವನ್ನು ನಾಡಿಗಾಗಿ ಅರ್ಪಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಮಾತನಾಡಿ ಕೆಂಪೇಗೌಡರ ದೂರದಷ್ಟಿಯ ಫಲವಾಗಿ ಅಂದಿನ ಬೆಂದಕಾಳೂರು ಇಂದಿನ ವಿಶ್ವವಿಖ್ಯಾತ ಬೆಂಗಳೂರಾಗಿ ರೂಪು ಗೊಳ್ಳಲು ಕಾರಣವಾಗಿದೆ. ಜನಪ್ರತಿನಿಧಿಗಳು ಕೆಂಪೇಗೌಡರ ದೂರದಷ್ಟಿಕೋನವುಳ್ಳ ಜನಪರ ಕಾರ್ಯಕ್ರಮ ವನ್ನು ರೂಪಿಸಿದರೆ ಶತ-ಶತಮಾನಗಳು ಕಳೆದರು ಜನರ ಮನದಲ್ಲಿ ನೆಲೆಯೂರಲು ಸಾಧ್ಯವಾಗಲಿದೆ. ಇಂದು ಬೆಂಗಳೂರು ದಿನನಿತ್ಯ ಅದ್ಬುತವಾಗಿ ಬೆಳೆಯುತ್ತಿದೆ, ಕೆಂಪೇಗೌಡರ ಕಾಲದಲ್ಲಿ ಕಟ್ಟಿದಂತಹ ಕೆರೆಗಳನ್ನು ಇಂದು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮಹಾನ್ ಪುರುಷರನ್ನು ಜಾತಿಯ ಸಂಕೋಲೆಯಲ್ಲಿ ಬಂಧಿಸಬಾರದು ಎಂದರು.
ಪಿ.ಪ್ರಶಾಂತ್ ಗೌಡ ಮಾತನಾಡಿ ದಾರ್ಶನಿಕರು ಮತ್ತು ಮಹನೀಯರನ್ನು ನಾವು ಅವರು ಮಾಡಿದ ಸೇವೆ ಮತ್ತು ಸಾಧನೆ ನೋಡಿ ಗುರುತಿಸುತ್ತೇವೆ ಈ ಸಾಲಿನಲ್ಲಿ ನಿಲ್ಲಬಲ್ಲ ಶ್ರೇಷ್ಠ ವ್ಯಕ್ತಿಗಳಲ್ಲಿ ಮಾಗಡಿ ದೊರೆ ಕೆಂಪೇಗೌಡರು ಪ್ರಮುಖರು ಇವರು ಮಹಾ ಕನಸುಗಾರರಾಗಿದ್ದ ಅವರು ಬೆಂಗಳೂರು ಮಹಾನಗರ ನಿರ್ವಣಕ್ಕೆ ಕ್ರಿ.ಶ. ೧೫೩೭ರಲ್ಲಿ ನಾಂದಿ ಹಾಡಿದರು. ನಾಡಿನ ಧರ್ಮ, ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದ ಕೆಂಪೇಗೌಡರ ಜಯಂತಿಯನ್ನು ಇಂದು ನಾಡಿನಾಧ್ಯಂತ ಶ್ರಧ್ದ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಅಪಾರ. ಬೆಂಗಳೂರು ನಿರ್ಮಾಣ ವೇಳೆ ದೂರದೃಷ್ಟಿಯಿಂದ ೪ ದಿಕ್ಕುಗಳಲ್ಲೂ ದ್ವಾರವನ್ನು ನಿರ್ಮಿಸುವುದರ ಜತೆಗೆ ಕೆರೆಕಟ್ಟೆಗಳ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ದೇಗುಲದ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ. ಜತೆಗೆ ಉತ್ತಮ ಆಡಳಿತಗಾರರಾಗಿದ್ದು, ಇವರ ಕಾಲದಲ್ಲಿ ಹಲವು ಸಾಮಾಜಿಕ ಸುಧಾರಣೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಂದಿಪುರ ಲೋಕೇಶ್, ಮುಖಂಡರಾದ ಲೋಕಪಾಲಯ್ಯ, ವಿಕ್ರಂರಾಜ್, ರಾಘವೇಂದ್ರ, ಹುಣಸವಾಡಿ ನಾಗೇಶ್, ನಳಿನಿ, ಬಾನು, ಹೆಮ್ಮಿಗೆ ರವಿ, ರಮೇಶ್, ಕಿರಂಗೂರು ಮೋಹನ್, ಶರವಣ, ಪ್ರಹ್ಲಾದ್ ಸೇರಿದಂತೆ ಮತ್ತಿತರರು ಹಾಜರಿದ್ದರು