ದುಬೈ: ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ ಎಂದರೆ, ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಯುಎಇ ಒಕ್ಕಲಿಗರ ಸಂಘ ಇಂದು ಸೋಮವಾರ ಹಮ್ಮಿಕೊಂಡಿದ್ದ ದುಬೈನ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕೃತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ. ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು.
ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೆ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೀಯ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ದುಬೈನಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡರ ಉತ್ಸವದಲ್ಲಿ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವರಾದ ಸಿ.ಪಿ. ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ಕೆ.ಆರ್. ಪೇಟೆ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಕನ್ನಡ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದುಬೈ ಕನ್ನಡಿಗರು, ಅದರಲ್ಲಿಯೂ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.