ಮಂಡ್ಯ: 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಧ್ವಜ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನಾಳೆ(ಆ.15) ವಿವಾದಿತ ಅರ್ಜುನ ಸ್ತಂಭದಲ್ಲಿ ಶಾಸಕ ಗಣಿಗ ರವಿಕುಮಾರ್ ಧ್ವಜಾರೋಹಣಕ್ಕೆ ವಿರೋಧ ವ್ಯಕ್ತವಾಗಿದ್ದು, ಇಂದು ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಶಾಸಕರು ಧ್ವಜಾರೋಹಣ ಮಾಡದಂತೆ ಆಗ್ರಹಿಸಿ, ಗ್ರಾಮಸ್ಥರೇ ಧ್ವಜಾರೋಹಣ ನೆರವೇರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನು ಧ್ವಜಾರೋಹಣ ಮಾಡಲು ಗ್ರಾಮಸ್ಥರಿಗೆ ಅವಕಾಶ ಕೊಡದಿದ್ರೆ, ಅಧಿಕಾರಿಗಳೇ ನೆರವೇರಿಸಬೇಕು. ಆದರೆ, ಶಾಸಕರು ಧ್ವಜಾರೋಹಣ ಮಾಡಿದ್ರೆ ಶಾಂತಿ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಹನುಮ ಧ್ವಜ ಹಾರಿಸಿದ್ದರಿಂದ 108 ಅಡಿ ಎತ್ತರದ ಅರ್ಜುನ ಸ್ತಂಭ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಶಾಂತಿ ಸಭೆ ನಡೆಸಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಧ್ವಜಾರೋಹಣ ನಡೆಸುವುದಾಗಿ ಸಭೆಯಲ್ಲಿ ಗ್ರಾಮಸ್ಥರಿಗೆ ಎಸಿ ಶಿವಮೂರ್ತಿ ಭರವಸೆ ನೀಡಿದ್ದಾರೆ.