Monday, April 21, 2025
Google search engine

Homeಅಪರಾಧಕೇರಳ ಉದ್ಯಮಿ ಹನಿಟ್ರ್ಯಾಪ್ ಪ್ರಕರಣ: ಯುವತಿ ಸೇರಿದಂತೆ ಮೂವರ ಬಂಧನ

ಕೇರಳ ಉದ್ಯಮಿ ಹನಿಟ್ರ್ಯಾಪ್ ಪ್ರಕರಣ: ಯುವತಿ ಸೇರಿದಂತೆ ಮೂವರ ಬಂಧನ

ಮೈಸೂರು: ಕೇರಳದ ಉದ್ಯಮಿಯೊಬ್ಬರನ್ನು ಬಲವಂತವಾಗಿ ಎಳೆದೊಯ್ದು, ಯುವತಿಯ ಜೊತೆಗೆ ಫೋಟೋ ತೆಗೆದು ಹಣಕ್ಕಾಗಿ ಬ್ಲ್ಯಾಕ್ ​ಮೇಲ್ ಮಾಡಿದ್ದ ಆರೋಪಿಗಳನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫಜಲುಲ್ಲಾ ರೆಹಮಾನ್, ರಿಜ್ವಾನ್ ಹಾಗೂ ಓರ್ವ ಯುವತಿ ಬಂಧಿತ ಆರೋಪಿಗಳು.

ಸುಮಾರು 8 ತಿಂಗಳ ಹಿಂದೆ ನಡೆದ ಪ್ರಕರಣದ ಜಾಡು ಹಿಡಿದ ಗ್ರಾಮಾಂತರ ಪೊಲೀಸರು, ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಕಾರಾಗೃಹಕ್ಕೆ ಕಳಿಸಿದ್ದಾರೆ. ಆರೋಪಿಗಳಿಂದ 50 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರ​ನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಕೇರಳದ ತಿರುನೆಲ್ಲಿಯ ಉದ್ಯಮಿಯು ಚೆನ್ನೈನಿಂದ ವಾಪಸ್ ಬಂದು, ಮೈಸೂರು ಮೂಲಕ ತಮ್ಮ ಕಾರಿನಲ್ಲಿ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ಮಾನಂದವಾಡಿ ರಸ್ತೆಯಲ್ಲಿ ಈ ಆರೋಪಿಗಳು ಅಡ್ಡಗಟ್ಟಿ, ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದು ಮಹಿಳೆಯ ಜೊತೆಗೆ ಮಲಗಿಸಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದರು.

ನಂತರ ಉದ್ಯಮಿಗೆ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಹೆದರಿಸಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಗೌರವಕ್ಕೆ ಅಂಜಿದ ಉದ್ಯಮಿ 5 ಲಕ್ಷ ರೂ. ಪಾವತಿಸಿದ್ದಾರೆ. ಅಲ್ಲದೇ, ಆರೋಪಿಗಳು ಉದ್ಯಮಿ ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ನಡೆದ ಘಟನೆ ಬಗ್ಗೆ ಉದ್ಯಮಿಯು ತಿರುನೆಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೃತ್ಯವು ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬೆನ್ನತ್ತಿ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 50 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರು ವಶಪಡಿಸಿಕೊಂಡಿದ್ದಾರೆ.

ಇದೇ ತಂಡ ಮಡಿಕೇರಿಯಲ್ಲೂ ಇಂತಹದ್ದೇ ಕೃತ್ಯ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಜಿಲ್ಲಾ ಎಸ್​​ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ ​​ಪಿ ನಂದಿನಿ ಹಾಗೂ ಡಿವೈಎಸ್​ಪಿ ಕರೀಂ ರಾವತರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್​ ಪೆಕ್ಟರ್ ಡಾ. ಎಂ.ಎಲ್. ಶೇಖರ್ ನೇತೃತ್ವದಲ್ಲಿ ಪಿಎಎಸ್‌ ಐ ಚಂದ್ರ ಹಾಗೂ ಸಿಬ್ಬಂದಿಯಾದ ಮಹೇಶ್, ರವಿ, ಸುನಿಲ್ ಕುಮಾರ್ ಆರೋಪಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ‌ ಕೈಗೊಂಡಿದ್ದರು.

RELATED ARTICLES
- Advertisment -
Google search engine

Most Popular