ಕೊಟ್ಟಾಯಂ (ಕೇರಳ): ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ದಿ.ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾಗಿದ್ದ ಪುತ್ತುಪ್ಪಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್ ಇಂದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಮ್ಮನ್ ಚಾಂಡಿ ಪುತ್ರರಾದ ಚಾಂಡಿ ಉಮ್ಮನ್ ೩೬,೪೫೪ ಮತಗಳ ಅಂತರದಿಂದ ಗೆದ್ದು ತಂದೆಯ ಕ್ಷೇತ್ರ ಉಳಿಸಿಕೊಂಡಿದ್ದಾರೆ.
ಪುತ್ತುಪಲ್ಲಿ ಕ್ಷೇತ್ರದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ನಡುವೆ ಪ್ರಮುಖ ಹಣಾಹಣಿ ಏರ್ಪಟ್ಟಿತ್ತು. ಉಮ್ಮನ್ ಚಾಂಡಿ ಅವರ ಉತ್ತರಾಧಿಕಾರಿ ಚಾಂಡಿ ಉಮ್ಮನ್ ಭಾರಿ ಅಂತರದಿಂದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೇ, ಕೇರಳ ವಿಧಾನಸಭೆಗೆ ನಡೆದ ಉಪಚುನಾವಣೆಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಚಾಂಡಿ ಉಮ್ಮನ್ ಒಟ್ಟು ೭೮,೦೯೮ ಮತಗಳನ್ನು ಪಡೆದರೆ, ಇವರ ಸಮೀಪದ ಪ್ರತಿಸ್ಪರ್ಧಿ ಸಿಪಿಐಎಂ ಅಭ್ಯರ್ಥಿ ಜೈಕ್ ಸಿ.ಥಾಮಸ್ ೪೧,೬೪೪ ಮತಗಳ ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಪಕ್ಷದ ಜಿಲ್ಲಾಧ್ಯಕ್ಷ ಲಿಜಿನ್ ಲಾಲ್ ೬,೪೪೭ ಮತಗಳನ್ನು ಪಡೆದಿದ್ದಾರೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಸಿಪಿಐಎಂ ಮತ್ತು ಬಿಜೆಪಿಯ ಮತಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ.
೨೦೨೧ರ ಚುನಾವಣೆಗೆ ಹೋಲಿಸಿದರೆ ಸಿಪಿಐಎಂ ೧೨,೮೦೦ ಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿದೆ. ೨೦೨೧ರಲ್ಲೂ ಸಿಪಿಐಎಂನಿಂದ ಸ್ಪರ್ಧಿಸಿದ್ದ ಜೈಕ್ ಸಿ.ಥಾಮಸ್ ೫೪,೩೨೮ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಒಟ್ಟು ೧೧,೬೯೪ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗಮನ ಸೆಳೆದಿತ್ತು. ಆದರೆ, ಈ ಬಾರಿ ಬಿಜೆಪಿ ಸಹ ೫,೪೦೦ ಮತಗಳನ್ನು ಕಳೆದುಕೊಂಡಿದೆ.
ಕಳೆದ ೫೩ ವರ್ಷಗಳಿಂದ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಉಮ್ಮನ್ ಚಾಂಡಿ ಜುಲೈ ೧೮ರಂದು ನಿಧನ ಹೊಂದಿದ್ದರು. ಹೀಗಾಗಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿತ್ತು. ಕೇರಳ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿ ಅತಿ ಹೆಚ್ಚು ಅಂತರದ ಗೆಲುವುಗಳಲ್ಲಿ ಒಂದಾಗಿದೆ. ೨೦೨೧ರಲ್ಲಿ ಸಿಪಿಐಎಂ ನಾಯಕಿ ಕೆ. ಶೈಲಜಾ ೬೦,೯೬೩ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಹಾಲಿ ಸಿಎಂ ಪಿಣರಾಯಿ ವಿಜಯನ್ ಅವರ ಕ್ಷೇತ್ರದಿಂದ ೫೦,೧೨೩ ಮತಗಳ ಅಂತರದಿಂದ ಜಯ ಗಳಿಸಿದ್ದರು.