ತಿರುವನಂತಪುರ: ಕೇರಳದ ಕೊಚ್ಚಿಯಲ್ಲಿ ಆಸ್ಪತ್ರೆಯ ಐಸಿಯುನಲ್ಲೇ ವಧುವಿಗೆ ವರ ತಾಳಿ ಕಟ್ಟಿದ ಅಪರೂಪದ ಘಟನೆ ನಡೆದಿದೆ.
ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮದುವೆ ನಿಗದಿಯಾಗಿದ್ದ ಸಮಯವಾಗಿರುವ ಮಧ್ಯಾಹ್ನ 12:15ರಿಂದ 12:30ರ ನಡುವೆ ಸಮಾರಂಭ ನಡೆಸಲು ಶರೋನ್ ಮತ್ತು ಕುಟುಂಬಸ್ಥರು ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿದರು. ಅವರ ವಿನಂತಿ ಅಂಗೀಕರಿಸಿದ ಆಸ್ಪತ್ರೆಯವರು ಐಸಿಯುನಲ್ಲೇ ಶರೋನ್ ಮೂಲಕ ಅವನಿಗೆ ತಾಳಿ ಕಟ್ಟುವ ಅವಕಾಶ ಕಲ್ಪಿಸಿದರು. ಕುಟುಂಬ ಸದಸ್ಯರು ಈ ಮೌನ–ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಅವನಿ ಶನಿವಾರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ಮಾಹಿತಿ ನೀಡಿದ್ದಾರೆ.



