ಮಂಡ್ಯ : ಜಿಲ್ಲೆಯ ಕೆರಗೋಡಿಯಲ್ಲಿ ಸಂಘಪರಿವಾರ, ಬಿಜೆಪಿ ಹಾಗೂ ಜೆಡಿಎಸ್ ಸೃಷ್ಠಿಸಿರುವ ಧ್ವಜ ವಿವಾದ ಸಂಬಂಧ ಮಂಡ್ಯ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ನಿಗಾ ವಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆರಗೋಡು ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರುವಂತಹ ಪೋಸ್ಟ್‌ಗಳ ಮೇಲೆ ನಿಗಾ ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಪ್ರಕಟಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ ಬುಕ್, ವಾಟ್ಸಾಪ್, ಇನ್ಟಾಗ್ರಾಂ, ಯುಟ್ಯೂಬ್ ಇತ್ಯಾದಿಗಳಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಭಂಗ ತರುವ ಚಿತ್ರಗಳು, ವಿಡಿಯೋಗಳು, ಪ್ರಚೋದನಾಕಾರಿ ಹೇಳಿಕೆಗಳು, ಪೋಸ್ಟರ್‌ಗಳು ಹಾಗೂ ಉಧ್ರೇಕಕಾರಿ ಭಾಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸುವವರ ಹಾಗೂ ಇದಕ್ಕೆ ಪ್ರಚೋದನೆ ನೀಡುವಂತವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಡಳಿತದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆರೆಗೋಡು ಕೇಸರಿ ಧ್ವಜ ಅಪಮಾನ ಪ್ರಕರಣದ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಸ್ಫೋಟ ಗೊಂಡ ಜನರ ರಾಮಭಕ್ತಿ ಹನುಮಶಕ್ತಿ ಕಂಡು ಬೆಚ್ಚಿಬಿದ್ದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ಛೂ ಬಿಟ್ಟು ಸಾಮಾಜಿಕ ಜಾಲತಾಣದ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.
ಮಂಡ್ಯ ಜಿಲ್ಲಾಡಳಿತದ ಆದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮವಾಗಿದೆ, ಇದು ತುಘಲಕ್ ದರ್ಬಾರ್ ನೆನಪಿಸುವಂತಿದೆ. ಕಾನೂನು ಸುವ್ಯಸ್ಥೆಯ ಜವಾಬ್ದಾರಿ ಹೊತ್ತ ಮಂಡ್ಯ ಜಿಲ್ಲಾಡಳಿತ ವಿವೇಕವನ್ನು ಮರೆತು ನಡೆದು ಕೊಳ್ಳುತ್ತಿದೆ, ಪ್ರಚೋದನೆಗೆ ಅವಕಾಶ ನೀಡದ ಕೇಸರಿ ಧ್ವಜವನ್ನು ಕೆಳಗಿಳಿಸಿ ಜನರ ಭಕ್ತಿಗೆ ಭಂಗ ತಂದು ಅಶಾಂತ ಪರಿಸ್ಥಿತಿ ನಿರ್ಮಿಸಿತು, ಇದೀಗ ಕಾನೂನಿ ದಂಡ ತೋರಿಸಿ ಹನುಮ ಭಕ್ತರನ್ನು ಕೆರಳಿಸ ಹೊರಟಿದೆ” ಎಂದು ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದಾರೆ.