ಮೈಸೂರು: ಸಂವಿಧಾನದ ಮೌಲ್ಯ ಹಾಗೂ ಗುರಿ ಆಶಯಗಳನ್ನು ಕೇಶವಾನಂದ ಭಾರತಿ ಪ್ರಕರಣವು ಎತ್ತಿ ಹಿಡಿಯಿತು. ಸರ್ವೋಚ್ಚ ನ್ಯಾಯಾಲಯದ 13 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನದ ಪೀಠವು ಈ ಪ್ರಕರಣದಲ್ಲಿ ಸಂಸತ್ತಿನ ತಿದ್ದುಪಡಿ ಇತಿಮಿತಿಯ ಬಗ್ಗೆ ಬಹಳ ಸ್ಪಷ್ಟವಾದ ಆದೇಶ ನೀಡಿದೆ ಎಂದು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ತಿಳಿಸಿದರು.
ಎನ್. ನಂಜೇಗೌಡರ ಸರಣಾರ್ಥ ವಿದ್ಯಾವರ್ಧಕ ಕಾನೂನು ಕಾಲೇಜಿನ ಪಿ.ಎಂ. ಚಿಕ್ಕಬೋರಯ್ಯ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಥಮ ಉಪನ್ಯಾಸದಲ್ಲಿ 50 ವರ್ಷದ ಮೂಲ ತಳಹದಿ ಸಿದ್ಧಾಂತ: ಕೇಶವಾನಂದ ಭಾರತಿ ಪ್ರಕರಣ ಪುರಾವಲೋಕನ ವಿಷಯ ಕುರಿತು ಮಾತನಾಡಿದರು. ಅನುಚ್ಚೇದ 368ರ ಅಡಿಯಲ್ಲಿ ಭಾರತ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಂವಿಧಾನದ ಮೂಲತತ್ವಗಳಿಗೆ ಧಕ್ಕೆ ಬರದಂತೆ ತಿದ್ದುಪಡಿ ಮಾಡಬೇಕು. ಸಂವಿಧಾನದ ಮೂಲತತ್ವಗಳಾದ ಜಾತ್ಯತೀತ, ಸಾರ್ವಭೌಮ, ಸಾಮಾಜಿಕ ನ್ಯಾಯ, ನ್ಯಾಯಿಕ ವಿಮರ್ಶೆ, ಸ್ವತಂತ್ರ ನ್ಯಾಯಾಂಗ, ಸಂಯುಕ್ತ ಮಾದರಿ ಸರ್ಕಾರ, ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಇವೆಲ್ಲವೂ ಇಂದಿಗೂ ಉಳಿದುಕೊಂಡಿದೆ ಎಂದರೆ, ಅದಕ್ಕೆ ಮೂಲಕಾರಣವೇ ಕೇಶವಾನಂದ ಭಾರತಿ ಪ್ರಕರಣ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ವಿವರಿಸಿದರು.
ಸಂಸತ್ತಿನ ಸದಸ್ಯರಿಗೆ ತಿದ್ದುಪಡಿ ಅಧಿಕಾರವನ್ನು ಸಂಪೂರ್ಣವಾಗಿ ನೀಡಿದ್ದರೆ, ಶಾಶ್ವತವಾಗಿ ಅವರು ಸದಸ್ಯರಾಗಿ ಮುಂದುವರೆಯುವಂತೆ ತಿದ್ದಪಡಿ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಅವರು ಭಾರತ ದೇಶದ ಬಹುತ್ವ ನೆಲೆಗಟ್ಟಿನ ಸಂಸ್ಕೃತಿಯನ್ನು ಸುಲಭವಾಗಿ ಬದಲಾಯಿಸಿಬಿಡುವ ಅಪಾಯಗಳು ಎದುರಾಗುತ್ತಿದ್ದವು. ಆದರೆ ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತಿ ಪ್ರಕರಣದ ಮೂಲಕ ಮೂಲ ತಳಹದಿ ಸಿದ್ಧಾಂತವನ್ನು ರೂಪಿಸಿ ಯಾವ ಯಾವ ವಿಚಾರಗಳಲ್ಲಿ ತಿದ್ದುಪಡಿ ತರಬಾರದು ಎಂಬ ಅಂಶಗಳನ್ನು ಗುರುತಿಸುವುದರ ಮೂಲಕ ಸಂವಿಧಾನವನ್ನು ರಕ್ಷಿಸಿದೆ. ಈ ಪ್ರಕರಣದಲ್ಲಿ ಸುಮಾರು 70 ರಾಷ್ಟ್ರಗಳ ಸಂವಿಧಾನವನ್ನು ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವ್ಯಾಸಂಗಕ್ಕೆ ಈ ತಲೆಮಾರಿನ ಯುವಜನತೆ ಆಸಕ್ತಿ ತೋರುವುದು ನಿಜಕ್ಕೂ ಹೆಮೆಪಡುವಂತದ್ದು. ಮೆಡಿಕಲ್, ಇಂಜಿನಿಯರಿಂಗ್ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದ ವಿದ್ಯಾರ್ಥಿಗಳು ಈಗ ಕಾನೂನು ಕಲಿಯಲು ಬರುತ್ತಿದ್ದಾರೆ. ಕಾನೂನು ಓದಿಗೆ ಕರ್ನಾಟಕ ದೇಶದಲ್ಲಿಯೇ ಮಾದರಿ ರಾಜ್ಯವಾಗಿದೆ. ಕಾನೂನು ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಎನ್.ನಂಜೇಗೌಡ ಪತ್ನಿ ಕಮಲಾಕ್ಷಿ ನಂಜೇಗೌಡರು ಉಪಸ್ಥಿತರಿದ್ದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ಸದಸ್ಯರಾದ ಶಿವಲಿಂಗಯ್ಯ, ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ ಉಪಸ್ಥಿತರಿದ್ದರು. ನಂಜೇಗೌಡರ ಪುತ್ರ ಪ್ರೊ.ಎನ್.ಸತೀಶ್ ಗೌಡ ಪ್ರಸ್ತಾವಿಕ ನುಡಿಗಳನ್ನಾಡಿದರು ಸಹಾಯಕ ಪ್ರಾಧ್ಯಾಪಕಿ ಎಂ.ಜೆ.ಇಂದುಮತಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಎಚ್.ಎಸ್.ಶಿವಕುಮಾರ್ ವಂದಿಸಿದರು.