ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಗುರುವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿರುವ ಬಾಕಿ ಕೂಲಿ ಮೊತ್ತ ನೀಡಬೇಕು, ಜೊತೆಗೆ ಗ್ರಾಮದಲ್ಲಿ ಕೂಲಿಯನ್ನು ನೀಡಬೇಕು ಎಂದು ಒತ್ತಾಯಿಸಿ ನರೇಗಾ ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗುರುವಾರ ಪಂಚಾಯಿತಿ ಕಚೇರಿ ಮುಂಭಾಗ ಇರುವ ಕೆಸ್ತೂರು ಮಾರಮ್ಮ ದೇಗುಲದ ಮುಂಭಾಗ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಕಚೇರಿ ಮುಂಭಾಗ ಮಹಿಳೆಯರೂ ಸೇರಿದಂತೆ ನೂರಾರು ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೮೬ ಮಂದಿ ೬ ದಿನಗಳ ಕಾಲ ಕೆರೆಯ ಕೆಲಸವನ್ನು ಮಾಡಿದ್ದೇವೆ. ಆದರೆ ಈ ಕೂಲಿಯನ್ನು ಪಾವತಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಇಲ್ಲಿನ ಪಿಡಿಒ ನಮಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಅಲ್ಲದೆ ಗ್ರಾಮದ ಪರಿಮಿತಿಯೊಳಗೆ ನಮಗೆ ಕೂಲಿ ಕೆಲಸವನ್ನು ನೀಡಿ ಎಂದು ಮನವಿ ಮಾಡಿದರೆ ಇದಕ್ಕೆ ಸ್ಪಂಧಿಸುತ್ತಿಲ್ಲ. ನರೇಗಾ ನಿಯಮಗಳ ಪ್ರಕಾರ ನಮಗೆ ೫ ಕಿ.ಮಿ. ವ್ಯಾಪ್ತಿಯಲ್ಲಿ ಕೆಲಸ ಮಾಡಿಸಲು ಅವಕಾಶವಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಗ್ರಾಮದಲ್ಲೇ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದ್ದರೂ ಸಹ ನಮಗೆ ಕೆಲಸ ನೀಡುತ್ತಿಲ್ಲ. ಆದರೆ ಬೇರೆಯವರು ಇಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.
ಇಲ್ಲಿ ಕಾರ್ಮಿಕರ ನಡುವೆಯೇ ತಾರತಮ್ಯ ಮಾಡಲಾಗುತ್ತಿದೆ ಎಂದು ರಾಜೇಶ್, ಶಾರದಮ್ಮ, ದೊಡ್ಡಮ್ಮ, ಶಿವಮ್ಮ, ಮಹದೇವಸ್ವಾಮಿ ಸೇರಿದಂತೆ ಅನೇಕರು ಆರೋಪಿಸಿ ಪಿಡಿಒ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಟನೆ ನಡೆಸಿದರು.
ಸ್ಥಳಕ್ಕೆ ನರೇಗಾ ಸಹಾಯಕ ನಿರ್ದೇಶಕ ಕೆ.ಎಂ. ರವೀಂದ್ರ ಭೇಟಿ ನೀಡಿ ಮಾತನಾಡಿ, ಬಾಕಿ ಇರುವ ಕೂಲಿ ಮೊತ್ತವನ್ನು ಪಾವತಿಸಿ ಇವರಿಗೆ ಗ್ರಾಮ ವ್ಯಾಪ್ತಿಯಲ್ಲೇ ಕೆಲಸವನ್ನು ನೀಡಬೇಕು ಎಂದು ಸೂಚನೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಗ್ರಾಮಸಭೆ ನಡೆಯಿತು. ಗ್ರಾಮಸಭೆಯಲ್ಲಿ ಈ ಸಾಲಿನ ನರೇಗಾ ಕಾಮಗಾರಿಗಳ ಬಗ್ಗೆ ಹಾಗೂ ಇತರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಪಿಡಿಒ ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ ಸದಸ್ಯರಾದ ಗುರು, ಪ್ರಸಾದ್ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.