ಹಿಟ್ ಸಿನಿಮಾಗಳಾದ ಕೆಜಿಎಫ್, ಉಗ್ರಂ ಸೇರಿದಂತೆ ಹಲವು ಚಿತ್ರಗಳಲ್ಲಿ ಭರ್ಜರಿ ಪಾತ್ರಗಳಲ್ಲಿ ಮಿಂಚಿದ ನಟ ಹರೀಶ್ ರಾಯ್ ಅವರು ಕ್ಯಾನ್ಸರ್ ಅನ್ನೋ ಮಹಾಮಾರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಜಿಎಫ್ ಚಿತ್ರದ ಶೂಟಿಂಗ್ ವೇಳೆ ಈ ಕಾಯಿಲೆ ಪತ್ತೆಯಾಗಿದ್ದು, ಈಗ ಅದು ತೀವ್ರಗೊಂಡಿದೆ.
ಸಿನಿಮಾ ಶೂಟಿಂಗ್‌ಗಳು ಇಲ್ಲದ ಕಾರಣದಿಂದ ಮನೆಯ ಹೊಣೆ ಹೊತ್ತಿರುವವರಾಗಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೈದ್ಯರು ಹೈ ಟ್ರೀಟ್ಮೆಂಟ್ ಅಗತ್ಯವಿದೆ ಎಂದು ಸೂಚಿಸಿದ್ದು, ಮುಂದಿನ ಹಂತದ ಚಿಕಿತ್ಸೆಗೆ 70-80 ಲಕ್ಷ ರೂ. ಅವಶ್ಯಕವಾಗಿದೆ.
ಪ್ರತಿ 21 ದಿನಕ್ಕೊಮ್ಮೆ ನೀಡಬೇಕಾದ 3.55 ಲಕ್ಷ ರೂ. ಖರ್ಚಿನ ಇಂಜೆಕ್ಷನ್ ಚಿಕಿತ್ಸೆ ಫಲಕಾರಿಯಾಗಲಿದೆ ಎನ್ನಲಾಗಿದೆ. ಒಟ್ಟು 6-7 ಸೈಕಲ್ ಈ ರೀತಿಯ ಇಂಜೆಕ್ಷನ್‌ಗಳಿದ್ದರೆ, ಅವಕ್ಕೆ ಬೇಕಾಗುವ ಮೊತ್ತ 70-80 ಲಕ್ಷ ರೂಪಾಯಿ. ಈ ಬಗ್ಗೆ ಅವರು ಕನ್ನಡ ಚಿತ್ರರಂಗದ ಕಲಾವಿದರಿಗೂ, ನಿರ್ಮಾಪಕರಿಗೂ, ಜನ ಸಾಮಾನ್ಯರಿಗೂ ಸಹಾಯ ಕೇಳಿದ್ದಾರೆ.
“ಈ ಚಿಕಿತ್ಸೆ ಬೇರೊಬ್ಬ ನಟ ಸಂಜಯ್ ದತ್‌ರಿಗೂ ಕೊಡಲಾಗಿತ್ತು. ಅವರು ಗುಣಮುಖರಾದರು. ನನಗೂ ಆ ಭರವಸೆ ಇದೆ. ಆದರೆ ಈ ಚಿಕಿತ್ಸೆಗೆ ನನ್ನಲ್ಲಿ ಹಣವಿಲ್ಲ. ನನ್ನ ಜೀವನವೇ ಸಿನಿಮಾ. ಇದನ್ನು ಬಿಟ್ಟು ನನಗೆ ಬೇರೆ ಕೆಲಸವನ್ನೂ ಗೊತ್ತಿಲ್ಲ,” ಎಂದು ಕಣ್ಣೀರಿನಲ್ಲಿ ಹರೀಶ್ ರಾಯ್ ಕೇಳಿಕೊಂಡಿದ್ದಾರೆ.
“ನಾನು ಗುಣಮುಖನಾದ ಮೇಲೆ, ನಿರ್ದೇಶಕರ ಮನೆ ಬಾಗಿಲಿಗೆ ಹೋಗಿ ಮತ್ತೊಮ್ಮೆ ಅವಕಾಶ ಕೇಳುತ್ತೇನೆ. ಚಿತ್ರರಂಗದ ಎಲ್ಲರ ಸಹಾಯದಿಂದ ಮತ್ತೆ ಹಳೇ ಹರೀಶ್ ರಾಯ್ ಆಗುತ್ತೇನೆ,” ಎಂದು ಮನವಿ ಮಾಡಿದ್ದಾರೆ.