Saturday, April 19, 2025
Google search engine

Homeಸ್ಥಳೀಯಕೆ.ಹೆಚ್.ರಾಮಯ್ಯ ಜನ್ಮದಿನವನ್ನು ಸರ್ಕಾರವೇ ಆಚರಿಸಬೇಕು

ಕೆ.ಹೆಚ್.ರಾಮಯ್ಯ ಜನ್ಮದಿನವನ್ನು ಸರ್ಕಾರವೇ ಆಚರಿಸಬೇಕು


ಮೈಸೂರು: ದೀನ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಭದ್ರಬುನಾದಿ ಹಾಕಿದ ಸಾಮಾಜಿಕ ಕಾಳಜಿಯ ಹಿತಚಿಂತಕ ಕೆ.ಹೆಚ್.ರಾಮಯ್ಯ ಅವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಜತೆಗೆ ಶಾಲಾ ಕಾಲೇಜುಗಳ ಪಠ್ಯದಲ್ಲಿ ಅವರ ಜೀವನ ಮತ್ತು ಸಾಧನೆಯ ಸೇರ್ಪಡೆ ಮಾಡಬೇಕೆಂದು ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಒತ್ತಾಯಿಸಿದರು.
ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಹರಿಕಾರ ಕೆ.ಹೆಚ್.ರಾಮಯ್ಯ ಅವರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಯುವಜನರು ಕೆ.ಹೆಚ್.ರಾಮಯ್ಯ ಅವರ ಆದರ್ಶಗಳನ್ನು ಪಾಲಿಸಲು ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ, ರಾಮಯ್ಯ ಅವರ ಜೀವನಗಾಥೆ ಸೇರುವ ಅಗತ್ಯವಿದೆ ಎಂದರು.
ದನಿಯಿಲ್ಲದವರಿಗೆ ದನಿ ನೀಡಿ, ಸಾಮಾಜಿಕ ನ್ಯಾಯಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಜನಪರ ನಾಯಕ ಕೆ.ಹೆಚ್.ರಾಮಯ್ಯ ನಾಡಿಗೆ ಗಮನಾರ್ಹ ಕೊಡುಗೆ ಸಲ್ಲಿಸಿದ್ದಾರೆ. ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೆ ತಂದ ಮೀಸಲಾತಿ ನೀತಿಗೆ ಕೆ.ಹೆಚ್.ರಾಮಯ್ಯ ಅವರೇ ಮೂಲ ಪ್ರೇರಕರು ಮತ್ತು ಕಾರಣಕರ್ತರು ಎಂದು ಸ್ಮರಿಸಿದರು.
ಮಹಾರಾಣಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಹಾಗೂ ಕೆ.ಹೆಚ್.ರಾಮಯ್ಯ ಅವರ ಮೊಮ್ಮೊಗ ಪ್ರೊ.ದೇವಿಪ್ರಸಾದ್ ಮಾತನಾಡಿ, ನನ್ನ ತಾತ ಯಾವ ಸೋಗುಗಳನ್ನು ಹಾಕಿಕೊಳ್ಳದೆ ತಳ ವರ್ಗದವರ ಹಿತ ಕಾಯ್ದವರು. ಬಡ ವಿದ್ಯಾರ್ಥಿಗಳಿಗೆ ಓದಲು ಉಚಿತ ಊಟ ಮತ್ತು ವಸತಿ ಕಲ್ಪಿಸಿದವರು. ಅವರ ಸೇವಾ ಕಾರ್ಯ ನಮಗೆಲ್ಲ ಆದರ್ಶ. ಸಮಾಜ ಸೇವೆ ಮಾಡುವವರು ಯಾವುದೇ ಪ್ರಶಸ್ತಿ ಪುರಸ್ಕಾರ ಪ್ರಚಾರಕ್ಕೆ ಹಾತೊರೆಯದೆ ಕೆಲಸ ಮಾಡಬೇಕು ಎಂದರು.
ಚಂದ್ರು ಮಂಡ್ಯ ಮತ್ತು ಚ.ಮ. ಉಮೇಶ ಬಾಬು ಅವರಿಗೆ ಕೆ.ಹೆಚ್.ರಾಮಯ್ಯ ಸ್ಮರಣಾರ್ಥ ವಿಕಾಸಶ್ರೀ ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಕುಣಿಗಲ್‌ನ ಅರೇಶಂಕರ ಮಹಾಸಂಸ್ಥಾನ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಸಾಹಿತಿ ಟಿ.ಸತೀಶ್ ಜವರೇಗೌಡ, ಲೇಖಕ ರವಿಶಂಕರ್ ಬಿಳಗುಲಿ, ಗೌಡ್ತಿಯರ ಸೇನೆಯ ರಾಜ್ಯಾಧ್ಯಕ್ಷೆ ರೇಣುಕಾ ಭಕ್ತರಹಳ್ಳಿ, ವೇದಿಕಯ ರಾಜ್ಯಾಧ್ಯಕ್ಷೆ ಹೆಚ್.ಎಲ್.ಯಮುನಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಕೆ.ಎನ್. ಜಯರಾಮೇಗೌಡ, ಕವಯತ್ರಿ ಯಶೋಧ ರಾಮಕೃಷ್ಣ, , ಜಾನಪದ ಕಲಾವಿದೆ ಸುಮಾ ಪ್ರಶಾಂತ್, ಮಂಡ್ಯ ವೈದ್ಯಕೀಯ ಸಂಸ್ಥೆಯ ನಿವೃತ್ತ ಪಿ.ಆರ್.ಓ. ಚ.ಮ. ಉಮೇಶ್ ಬಾಬು, ಮೈಸೂರು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ. ಗಿರೀಶ್, ರಂಗಕರ್ಮಿ ಚಂದ್ರು ಮಂಡ್ಯ ಸೇರಿದಂತೆ ಹಲವು ಸಾಧಕರಿಗೆ ವಿಕಾಸಶ್ರೀ, ಯುವ ಮತ್ತು ಬಾಲ ವಿಕಾಸಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

RELATED ARTICLES
- Advertisment -
Google search engine

Most Popular