ಮೊಟ್ಟಮೊದಲ ಖೊ–ಖೊ ವಿಶ್ವಕಪ್ ಪಂದ್ಯದಲ್ಲಿ ನೇಪಾಳವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಮಹಿಳಾ ಮತ್ತು ಪುರುಷರ ಖೊ-ಖೊ ತಂಡಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಚೊಚ್ಚಲ ಖೊ-ಖೊ ವಿಶ್ವಕಪ್‌ನಲ್ಲಿ ಭಾರತೀಯ ತಂಡಗಳ ಈ ಅಮೋಘ ಸಾಧನೆ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರಿನ ಯುವತಿ ಚೈತ್ರ. ಬಿ ಅವರು ವಿಶ್ವವಿಜೇತ ಮಹಿಳಾ ಖೊ-ಖೊ ತಂಡದ ಭಾಗವಾಗಿರುವುದು ನಾಡಿಗೆ ಹೆಮ್ಮೆಯ ಸಂಗತಿ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ದಿನ ಎಂದು ಹೇಳಿದ್ದಾರೆ.
ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಖೋ ಖೋ ವಿಶ್ವಕಪ್ 2025ರ ಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿ ಭಾರತ ಮಹಿಳಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಕಾ ಇಂಗಲ್ ನೇತೃತ್ವದ ಭಾರತ ತಂಡ 38-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನೇಪಾಳ ತಂಡ ಉತ್ತಮ ಪ್ರದರ್ಶನ ನೀಡಿ ಭಾರತದ ಮುನ್ನಡೆ ತಗ್ಗಿಸಿತ್ತು.
ಮೊದಲಾರ್ಧದ ಅಂತ್ಯಕ್ಕೆ ಭಾರತ 38-34 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಆಕ್ರಮಣಕಾರಿ ಆಟದ ಮೂಲಕ 73-24 ಅಂತರದಲ್ಲಿ ಮುನ್ನಡೆ ಸಾಧಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ನೇಪಾಳ ತಂಡಕ್ಕೆ ಹೆಚ್ಚಿನ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಭಾರತ 78-40 ಅಂತರದಲ್ಲಿ ಗೆಲುವು ಸಾಧಿಸಿತು.