ಗುಂಡ್ಲುಪೇಟೆ: ಕಿಚ್ಚ ಸುದೀಪ್ ಮೇಲೆ ಆಧಾರಗಳಿಲ್ಲದೆ ಆರೋಪ ಮಾಡುತ್ತಿರುವ ನಿರ್ಮಾಪಕರ ವಿರುದ್ಧ ಫಿಲ್ಮಿ ಛೇಂಬರ್ ಕ್ರಮ ವಹಿಸುವಂತೆ ಒತ್ತಾಯಿಸಿ ಗುಂಡ್ಲುಪೇಟೆ ಪಟ್ಟಣದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಮದಕರಿ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ಮಾಪಕರಾದ ಎಂ.ಎನ್.ಕುಮಾರ್, ಎಂ.ಎನ್.ಸುರೇಶ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅಭಿಮಾನಿ ಶರತ್ ಮಾತನಾಡಿ, ನಿರ್ಮಾಪಕರು ಆಧಾರಗಳಿಲ್ಲದೆ ಕಿಚ್ಚ ಸುದೀಪ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಖಂಡನೀಯ. ಈ ಕೂಡಲೇ ನಿರ್ಮಾಪಕರು ಸುದೀಪ್ ಅವರಿಗೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಿರ್ಮಾಪಕರ ಮನೆ ಮುಂದೆ ಕೂತು ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಆಧಾರ ಇಲ್ಲದೆ ಮಾತನಾಡುವವರನ್ನು ಫಿಲ್ಮ್ ಚೇಂಬರ್‍ಗೆ ಸೇರಿಸಲೇಬಾರದು. ರೆಹಮಾನ್ 20 ವರ್ಷದ ಹಿಂದಿನ ಕೇಸ್ ಇಟ್ಟುಕೊಂಡು ಬಂದಿದ್ದಾರೆ. ಬೇರೆ ಸಂದರ್ಶನದಲ್ಲಿ ಚೆನ್ನಾಗಿ ಮಾತನಾಡಿ ಈಗ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಕಿಚ್ಚ ಸುದೀಪ್ ಸಾಕಷ್ಟು ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಸಹಾಯ ಮಾಡಿದ್ದಾರೆ. ಜೊತೆಗೆ ಚಿತ್ರರಂಗದಲ್ಲಿ ಅಧಿಕ ಮಂದಿ ನೆಲೆ ನಿಲ್ಲಲು ಕಾರಣೀಭೂತರಾಗಿದ್ದಾರೆ. ಇವರಿಂದ ಸಾಕಷ್ಟು ಕುಟುಂಬಗಳು ಇಂದಿಗು ಜೀವನ ನಡೆಸುತ್ತಿವೆ. ಅಂತಹ ವ್ಯಕ್ತಿಯ ಮೇಲೆ ಯಾರದ್ದೋ ಮಾತು ಕೇಳಿ ಸುಖಾಸುಮ್ಮನೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಘಟನೆ ತಕ್ಷಣವೇ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಾದ ವಿನೋದ್, ಕಿರಣ್, ಅಜಿತ್, ಭರತ್, ಸತೀಶ್, ನಂದೀಶ, ನಿಂಗರಾಜು, ರಾಜು, ಸಿದ್ದು ಸೇರಿದಂತೆ ಇತರರು ಹಾಜರಿದ್ದರು.