ನವದೆಹಲಿ: ನೀಟ್ ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮಾಡುತ್ತಿರುವ ಕೇಂದ್ರೀಯ ತನಿಖಾ ದಳ, ಈ ಕೇಸ್ಗೆ ಸಂಬಂಧಿಸಿದಂತೆ ಸ್ಫೋಟಕ ರಹಸ್ಯಗಳನ್ನು ಬಯಲು ಮಾಡಿದೆ. ಇದೆಲ್ಲದರ ಮಧ್ಯೆ ಪ್ರಕರಣದ ಕಿಂಗ್ ಪಿನ್ ಆಗಿರುವ ರಸಾಯನಶಾಸ್ತ್ರ ಉಪನ್ಯಾಸಕನೊಬ್ಬನನ್ನ ಸಿಬಿಐ (CBI) ಅರೆಸ್ಟ್ ಮಾಡಿದೆ.
ಬಂಧಿತ ಆರೋಪಿಯನ್ನು ಪಿ.ವಿ. ಕುಲಕರ್ಣಿ ಎಂದು ಗುರುತಿಸಲಾಗಿದ್ದು, ರಸಾಯನಶಾಸ್ತ್ರ ಉಪನ್ಯಾಸಕರಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪರೀಕ್ಷಾ ಪ್ರಕ್ರಿಯೆಲ್ಲಿ ಕುಲಕರ್ಣಿ ಭಾಗಿಯಾಗಿದ್ದರು, ಜೊತೆಗೆ ಪ್ರಶ್ನೆಪತ್ರಿಕೆಗಳನ್ನ ಪರಿಶೀಲಿಸುವುದಕ್ಕೂ ಇವರಿಗೆ ಅವಕಾಶವಿತ್ತು ಎಂದು ಹೇಳಲಾಗಿದೆ.
ಕಳೆದ ಏಪ್ರಿಲ್ ಕೊನೇ ವಾರದಲ್ಲಿ ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಶಾ ವಾಘ್ಮರೆ ಸಹಾಯದಿಂದ ವಿದ್ಯಾರ್ಥಿಗಳನ್ನ ತಯಾರು ಮಾಡಿದ್ದಾರೆ. ಆರೋಪಿಯು ಪುಣೆಯಲ್ಲಿರುವ ತನ್ನ ನಿವಾಸದಲ್ಲಿ ಆಯ್ದ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ವಿಶೇಷ ತರಗತಿಗಳನ್ನ ನಡೆಸುತ್ತಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ ಎಂದು ಸಿಬಿಐ ಹೇಳಿದೆ.
ಈ ವಿಶೇಷ ತರಗತಿ ನಡೆಸುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಉತ್ತರ ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನೇ ಡಿಕ್ಟೇಟ್ ಮಾಡಿದ್ದರು. ಅಲ್ಲದೇ ಪ್ರಶ್ನೋತ್ತರಗಳನ್ನು ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಂಡಿದ್ದು, ಅವುಗಳನ್ನ ವಿದ್ಯಾರ್ಥಿಗಳಿಗೆ ನೀಡಿದ್ದರು. ಪಿ.ವಿ ಕುಲಕರ್ಣಿ ಕೈಬರಹದ ಪ್ರಶ್ನೆಗಳು ಮೇ 3 ರಂದು ನಡೆದ NEET UG 2026 ಪ್ರಶ್ನೆ ಪತ್ರಿಕೆಗೆ ನಿಖರವಾಗಿ ಹೊಂದಿಕೆಯಾಗಿವೆ ಎಂಬುದನ್ನೂ ಸಿಬಿಐ ತನಿಖೆ ಬಹಿರಂಗಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರದಿಂದ ಇದುವರೆಗೆ ಏಳು ಆರೋಪಿಗಳನ್ನು ಸಿಬಿಐ ಬಂಧಿಸಿದೆ.



