ಬಳ್ಳಾರಿ: ಬಳ್ಳಾರಿಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಬಳ್ಳಾರಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, 2023-24ನೇ ಶೈಕ್ಷಣಿಕ ವರ್ಷದಿಂದ ಕಿಷ್ಕಿಂದ ವಿಶ್ವವಿದ್ಯಾಲಯ ಪ್ರಾರಂಭಿಸುತ್ತಿರುವುದಾಗಿ ಟ್ರಸ್ಟ್ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್ ರವರು ತಿಳಿಸಿದರು.
ಇಂದು ನಗರದ ಬಿಬಿಸಿ ಕಾಲೇಜಿನ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರ ಎಜುಕೇಷನ್ ಹೆಲ್ತ್ & ರೂರಲ್ ಡೆವೆಲಪ್ ಮೆಂಟ್ ಟ್ರಸ್ಟ್(ರಿ) ಸಂಸ್ಥೆಯ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಈಗಾಗಲೇ, ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಮನಸ್ಥಿತಿಯೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಸಾಧಾರಣ ಕಲಿಕೆಯ ಅನುಭವವನ್ನು ಒದಗಿಸಲು ಬದ್ಧವಾಗಿದೆ ಎಂದರು.
ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಬೆಳೆಸುವ ಸಮಗ್ರ ಶೈಕ್ಷಣಿಕ ವಾತಾವರಣವನ್ನು ಪೋಷಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಸಂಸ್ಥೆಯು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ನೇಮಕಗೊಂಡಿರುವ ಡಾ. ಯಶವಂತ್ ಭೂಪಾಲ್‌ರವರು ಮಾತನಾಡುತ್ತಾ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಂಸ್ಥೆಗಳಾದ 1)ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ ಮೆಂಟ್ 2)ಸಂಜಯ ಗಾಂಧಿ ಪಾಲಿಟೆಕ್ನಿಕ್ 3)ಬಳ್ಳಾರಿ ಪ್ರವೇಟ್ ಐ.ಟಿ.ಐ, 4)ಬಿಪಿಎಸ್ ಸಿ ಸ್ಕೂಲ್ & ಕಾಲೇಜ್, 5)ಬಿಪಿಎಸ್‌ಸಿ ಪದವಿ ಪೂರ್ವ ಕಾಲೇಜ್, 6)ಬಳ್ಳಾರಿ ಬಿಸಿನೆಸ್ ಕಾಲೇಜ್ ಗಳು ಉತ್ತಮ ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶದೊಂದಿಗೆ ಹೆಚ್ಚಿನ ಪ್ಲೇಸ್ ಮೆಂಟ್ ಮತ್ತು ಕೌಶಲ್ಯಾಬಿವೃದ್ದಿಗೆ ಹೆಸರುವಾಸಿಯಾಗಿವೆ. ಈ ಅನುಭವವೇ ಕಿಷ್ಕಿಂದ ವಿಶ್ವವಿದ್ಯಾಲಯ ಸ್ಥಾಪಿಸಲು ನಾಂದಿಯಾಗಿದೆ ಎಂದು ತಿಳಿಸಿದರು.
ಕಿಷ್ಕಿಂದ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಕಾಯ್ದೆ 2023 ಕರ್ನಾಟಕ ಅಧಿನಿಯಮ ಸಂಖ್ಯೆ: 20/2023 ಸ್ಥಾಪಿತವಾಗಿ ಈ ವರ್ಷದಿಂದ ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ವಿಶ್ವವಿದ್ಯಾಲಯವು ಬಳ್ಳಾರಿ-ಸಿರುಗುಪ್ಪ ರಸ್ತೆಯ ಸಿಂಧಿಗೇರಿ ಗ್ರಾಮದ ಹತ್ತಿರ ಟ್ರಸ್ಟಿನ ಸ್ವಂತ 50 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಶಾಶ್ವತ ಯೂನವರ್ಸಿಟಿ ಕ್ಯಾಂಪಸ್ ಸ್ಥಾಪನೆ ಮಾಡಲು ಸಖಲ ಸಿದ್ದತೆಮಾಡಿಕೊಂಡಿರುವುದಾಗಿ ತಿಳಿಸಿದರು.
ಇನ್ನೂ 2 ವರ್ಷದಲ್ಲಿ ಅಂದಾಜು ರೂ.100 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ, ಪ್ರಯೋಗಾಲಯ, ಆಡಳಿತ ಭವನ, ಗ್ರಂಥಾಲಯ, ವಸತಿ ಸೌಕರ್ಯ, ಆಟದ ಮೈದಾನ ಹಾಗೂ ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಹಾಗೂ ಈಗಾಗಲೇ ಅವಶ್ಯಕತೆಗೆ ಬೇಕಾಗುವ ಎಲ್ಲಾ ರೀತಿಯ ಕಾರ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದಿದ್ದಾರೆ.