ಮೈಸೂರು: ಭಾರತದ ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ನಾಡಪ್ರೇಮ ಅಮೋಘವಾದದ್ದು ಎಂದು ಹಿರಿಯ ಸಾಹಿತಿಗಳಾದ ಪ್ರೊ.ಎಸ್ ಶಿವರಾಜಪ್ಪ ಅವರು ತಿಳಿಸಿದರು.
ಇಂದು ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ 2023 ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆಯುವಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮಳ ಕೆಚ್ಚೆದೆಯ ಹೋರಾಟವನ್ನು ಇತಿಹಾಸ ಮರೆಯುವಂತಿಲ್ಲ. ಬ್ರಿಟಿಷರ ದುರಾಡಳಿತದ ವಿರುದ್ಧ ಸಿಡಿದೆದ್ದು ನಿಂತ ಕೆಚ್ಚೆದೆಯ ಕನ್ನಡತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ತಿಳಿಸಿದರು.
ಬ್ರಿಟಿಷರ ಆಡಳಿತವನ್ನು ಹತ್ತಿಕ್ಕಲು ಬ್ರಿಟಿಷರ ಶಶಾಸ್ತ್ರಗಳನ್ನು ನಾಶಗೊಳಿಸಿ, 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ಮುನ್ನಡೆಸಿದರು. ಪ್ಯಾರಾ ಮೌಂಟ್ಸಿ ಯನ್ನು ವಿರೋಧಿಸಿ ನಡೆಸಿದ ಮೊದಲ ದಂಗೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಸೋಲಿಸಿದರು ಆದರೆ ಎರಡನೇ ದಂಗೆಯ ನಂತರ ಸೋತು ಜೈಲು ಸೇರಿದರು. ಬ್ರಿಟಿಷ್ ಹೊಸಹತು ಶಾಹಿ ವಿರುದ್ಧ ಕಿತ್ತೂರು ಪಡೆಗಳನ್ನು ಮುನ್ನಡೆಸಿದ ಮೊದಲ ಮಹಿಳಾ ಸೇನಾನಿ ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ಎಂದು ಮಾಹಿತಿ ನೀಡಿದರು.
ಕಿತ್ತೂರಿನ ಸ್ವಾತಂತ್ರ್ಯಹೋರಾಟದಲ್ಲಿ ರಾಣಿ ಚೆನ್ನಮ್ಮಳಿಗೆ ಬಲಗೈ ಭಂಟನಾಗಿ ನಿಂತವನು ಸಂಗೊಳ್ಳಿ ರಾಯಣ್ಣ. ಈ ನೆಲದ ದಿಟ್ಟ ಶೌರ್ಯ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕೆಚ್ಚೆದೆಯ ಕನ್ನಡತಿ ರಾಣಿ ಚೆನ್ನಮ್ಮ ಇವರ ದೇಶಪ್ರೇಮ ಹಾಗೂ ತ್ಯಾಗವನ್ನು ಇಂದಿಗೂ ನಾಡು ಸ್ಮರಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಓದಿ ತಿಳಿದಿರುತ್ತೇವೆ. ಆಕೆಯನ್ನು ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರ ನೋಡದೇ ಆಕೆಯಲ್ಲಿನ ದೇಶಪ್ರೇಮ, ಶೌರ್ಯ, ದಿಟ್ಟ ನಿಲುವು ಇವುಗಳನ್ನು ಇಂದಿನ ಜನಾಂಗ ತಮ್ಮಲ್ಲಿ ಗುರುತಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಮೋಹನ್ ಕುಮಾರ್ ಗೌಡ್ರು, ಸಾಮಾಜಿಕ ಹೋರಾಟಗಾರರಾದ ಮೋಹನ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್ ಡಿ ಸುದರ್ಶನ್ ಸೇರಿದಂತೆ ಇತರ ರೂ ಉಪಸ್ಥಿತರಿದ್ದರು. (ಫೋಟೊ ಲಗತ್ತಿಸಲಾಗಿದೆ)