ಚಾಮರಾಜನಗರ: ಕಿತ್ತೂರು ರಾಣಿ ಚೆನ್ನಮ್ಮ ಭಾರತೀಯ ನಾರಿ ಶಕ್ತಿಯ ಪ್ರತೀಕವಾಗಿದ್ದರು. ಸ್ವಾಭಿಮಾನ, ಕಿಚ್ಚು, ದೇಶಭಕ್ತಿಯ ಸಂಕೇತ ಕಿತ್ತೂರು ರಾಣಿ ಚೆನ್ನಮ್ಮ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ರವರ ಕೊಡುಗೆಗಳ ಕುರಿತು ಮಾತನಾಡುತ್ತಾ ಬ್ರಿಟಿಷರ ವಿರುದ್ಧ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಹೋರಾಟ ನಡೆಸಿದ ವೀರ ವನಿತೆ ,ಕನ್ನಡದ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಸದಾ ಕಾಲ ಸ್ಮರಣೀಯರು, ಅಮರರು. ಬ್ರಿಟಿಷರ ವಿರುದ್ಧ ಗೆದ್ದ ವಿಜಯದ ಸಂಕೇತವಾಗಿ ಕಿತ್ತೂರು ವಿಜಯೋತ್ಸವವನ್ನು ಆಚರಿಸುತ್ತಿರುವ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಇತಿಹಾಸದ ಸಮಗ್ರವಾದ ಕನ್ನಡದ ನೆಲವನ್ನು, ಸ್ವಾಭಿಮಾನದ ಪ್ರತೀಕವಾಗಿ ಉಳಿಸಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಭಾರತೀಯರೆಲ್ಲರ ಹೆಮ್ಮೆಯ ಮಹಿಳೆ.
ಕಿತ್ತೂರು ಸಂಸ್ಥಾನ ಚಿಕ್ಕದಾದರೂ ಬ್ರಿಟಿಷರ ವಿರುದ್ಧ ತೋರಿದ ಪ್ರತಿಭಟನೆ ವಿಶೇಷವಾದದ್ದು. ಕಿತ್ತೂರಿನ ಕೆಲವು ದೇಶ ದ್ರೋಹಿಗಳು ಬ್ರಿಟಿಷರ ಪರವಾಗಿ ಆಸೆ ಆಮಿಷಗಳಿಗೆ ಬಲಿಯಾಗಿ ಕಿತ್ತೂರಿನ ರಹಸ್ಯಗಳನ್ನು ಶತ್ರುಗಳಿಗೆ ತಿಳಿಸಿ ಕಿತ್ತೂರು ನಾಶವಾಗಲು ಕಾರಣವಾದರು .ಆದರೂ ನೂರಾರು ಕಿತ್ತೂರಿನ ನಿಷ್ಠಾವಂತ ಸೈನಿಕರು ಹೋರಾಡಿ ಕಿತ್ತೂರು ಸಂಸ್ಥಾನವನ್ನು ಉಳಿಸಿದ ಹೆಮ್ಮೆ ನಮ್ಮದು .ದಿಟ್ಟ ತನದಿಂದ ಕೊನೆ ಕ್ಷಣದವರೆಗೂ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಬಂಧನಕ್ಕೆ ಒಳಗಾಗಿ ಅಂತಿಮವಾಗಿ ಮರಣ ಅಪ್ಪಿದರು . ಕೋಟಿ ಕೋಟಿ ಭಾರತೀಯರಲ್ಲಿ ವಿಶೇಷವಾಗಿ ಕನ್ನಡಿಗರಲ್ಲಿ ಮನೆ ಮಾತಾಗಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೋರಾಡುವ ಮೂರು ದಶಕಗಳ ಹಿಂದೆಯೇ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಎಂಬುದು ವಿಶೇಷವಾದದ್ದು.
ಕಿತ್ತೂರು ರಾಣಿ ಚೆನ್ನಮ್ಮರ ಬ ಲಗೈಯಾಗಿ ಹೋರಾಟ ನಡೆಸಿದ ನಂಬಿಕಸ್ತ ವೀರ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಮತ್ತೊಬ್ಬ ಅಪ್ಪಟ ದೇಶಭಕ್ತ. ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟದಲ್ಲಿ ಪಾಲ್ಗೊಂಡು ಕಿತ್ತೂರು ಸಂಸ್ಥಾನವನ್ನು ಉಳಿಸುವುದಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಂದ ಗಲ್ಲು ಶಿಕ್ಷೆಗೆ ಒಳಗಾಗಿ ಕನ್ನಡಿಗರ ಹೆಮ್ಮೆಯ ವೀರರಾಗಿದ್ದಾರೆ.ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನನ್ನು ಕನ್ನಡಿಗರು ಎಂದೆಂದೂ ಮರೆಯಲಾರರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ,ಮಾಜಿ ನಗರಸಭಾ ಸದಸ್ಯರಾದ ಪದ್ಮ ಪುರುಷೋತ್ತಮ್ ಮಾತನಾಡಿ ಕನ್ನಡಿಗರ ತಾಯಿ ಕಿತ್ತೂರು ರಾಣಿ ಚೆನ್ನಮ್ಮ. ಮಹಿಳೆಯಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ವಿಜಯೋತ್ಸವ ಹಾಗೂ ಕೊಡುಗೆಯ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಚೆನ್ನಮ್ಮರ ಇತಿಹಾಸವನ್ನು ತಿಳಿಸುವ ಮತ್ತು ಗೌರವಿಸುವ ಕಾರ್ಯ ಎಲ್ಲಡೆ ಮಾಡಬೇಕು ಎಂದು ತಿಳಿಸಿದರು.
ಝಾನ್ಸಿ ಮಕ್ಕಳ ಪರಿಷತ್ತಿನ ಗೌರವ ಅಧ್ಯಕ್ಷರು ,ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕುಸುಮ ಋಗ್ವೇದಿ, ಶಿವಲಿಂಗ ಮೂರ್ತಿ, ಪರಮೇಶ್ವರಪ್ಪ, ರವಿಚಂದ್ರಪ್ರಸಾದ್, ಕಾರ್ತಿಕ್, ಉಮೇಶ್ ಉಪಸ್ಥಿತರಿದ್ದರು.